ಆರಗೊಡವೆ ನಮಗಿನ್ಯಾಕೊ ಹರಿ ಅ
ಪಾರ ಮಹಿಮನ ದಯವೊಂದೆ ಸಾಕೊ ಪ
ಮಾರಿಗೀರಾಗಲಿ ದೂರಿ ಸಕಲರೆನ್ನ
ಸಾರಸಾಕ್ಷನ ಬಲವೊಂದೆ ಬೇಕೊ ಅ.ಪ
ಜಗಜನ ಕಂಡಂತೆ ಬೊಗಳಲಿ
ಬೊಗಳಿ ಬೊಗಳಿ ನಮ್ಮ ಶಪ್ಪರಿಯಲಿ
ನಿಗಮಾಗಮನುತ ಜಗಜೀವೇಶನ
ಸೊಗಸಿನ ಕೃಪೆಯೊಂದೆ ನಮಗಿರಲಿ 1
ದುರುಳ ಕೃತ್ತಿಮನೆಂದು ಜರಿಯಲಿ
ಜರಿಜರಿದು ಮರೆದ್ಹೋಗಲಿ
ಚರಣದಂತಿ ಪರಮ ಪಾವನಂಘ್ರಿ
ಕರುಣಾಮೃತವೊಂದೆ ನಮಗಿರಲಿ 2
ಕ್ಷೇಮ ತುಸು ಕಾಣದಳಿದ್ಹೋಗಲಿ
ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ
ನಾಮಧ್ಯಾನವೊಂದೇ ನಮಗಿರಲಿ 3