ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ಪ. ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ. ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ ಮೊರೆಬೀಳಲಿನ್ನಾರಿಗೆ ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ ಸರಿಯೆ ನಿನಗಿದು ಕೊರಗಿಸುವುದು ಜರಿದು ಬಳಲುವೆ ಧರೆಯೊಳೀಗ ನಾ ಸುರರ ರಕ್ಷಕ ಪರಮಪಾವನ ಕರವ ಮುಗಿವೆ ದರುಶನವ ನೀಡೊ 1 ನೀನಲ್ಲದೆ ಇನ್ನು | ನಾನಾರ ಭಜಿಸಲೊ ಗಾನವಿಲೋಲ ಹರಿ ಕಾನನದೊಳು ಕಣ್ಣು ಕಾಣದಂತಾಗಿದೆ ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ ಮಾನ ಪ್ರಾಣ ಶರೀರ ನಿನ್ನದೊ ನಾನು ಅನ್ಯರ ಭಜಿಸಲಾರೆನೊ ಹೀನಬುದ್ಧಿಯ ಬಿಡಿಸಿ ಗುರುಗಳ ಧ್ಯಾನವೆನಗಿತ್ತು ನೀನು ಕಾಯೊ 2 ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು ಇನ್ನು ಕರುಣವಿಲ್ಲವೆ ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ ನಿನ್ನ ಮನಸು ಕರಗಲಿನ್ನೇನಗೈಯ್ಯಲೊ ಎನ್ನ ಯತ್ನವು ವ್ಯರ್ಥವಾಯಿತು ಇನ್ನು ನೀ ದಯೆಗೆಯ್ಯಬೇಕೊ ಮುನ್ನ ಮಾಡಿದ ತಪ್ಪನೆಣಿಸದೆ ಎನ್ನ ದೃಷ್ಟಿಗೆ ನಿನ್ನ ತೋರೊ 3 ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ ಶರಧಿ ಅಮೃತ ಸುರರಿಗಿತ್ತೆ ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ ಕ್ಷಿತಿಯನಾಳ್ವರ ಹತವಗೈಸಿದೆ ಕ್ಷಿತಿಸುತೆಯ ಪ್ರೇಮದಲಿ ತಂದೆ ಹಿತದಿ ಪಾಂಡವ ಸುತರ ಕಾಯ್ದೆ ವ್ರತವ ಕೆಡಿಸಿ ಕಲಿಹತವಗೈದೆ 4 ಕಂತು ಜನಕನೆ ನಿನಗೆ ನ್ನಂತರ ತಿಳಿಯದೇನೋ ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ ಶಾಂತರೂಪವ ಎನ್ನ ಅಂತರಂಗದಿ ತೋರೊ ಚಿಂತಿತಾರ್ಥ ಪಂಥಗಾರನೆ ಎಂತು ದಿನಗಳು ಸಂದು ಹೋದುವೊ ಸಂತತಾನಂದನಂತಶಯನ 5
--------------
ಅಂಬಾಬಾಯಿ