ನಿತ್ಯ ಶುಭಮಂಗಳಂ ಪ.
ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ
ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ
ಸದಮಲ ಭಾವದಿಂ ಮಧುಕೈಟಭಾಂತಕನ
ಹೃದಯೇಶ್ವರಿಯ ಸೇವೆಗೈವೆ 1
ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ
ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ
ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ
ಜಾನಕಿಯ ಬಲಗೊಂಬೆ ಭರದಿ 2
ನೇಮನಿಷ್ಠೆಯ ಶುದ್ಧ ಹೇಮಕಲಶದಿ
ಮತ್ತೆ ಭಕ್ತಿರಸದ ಪನ್ನೀರ ತುಂಬಿ
ನಾಮಸಂಕೀರ್ತನೆಯ ನಾರಿಕೇಳವ ಬೆರಸಿ
ಶ್ರೀನಾರಿಗಭಿಷೇಕವ ಗೈವೆ 3
ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ
ಸತ್ವಗುಣದ ಪೀತಾಂಬರವನುಡಿಸಿ
ಕಂಚುಕ ತೊಡಿಸಿ
ಚಿತ್ತಜನ ಜನನಿಯರ ನೋಡಿ ನಲಿವೆ 4
ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ
ಶಾಂತಗುಣದ ತಿಲಕ ತಿದ್ದಿ
ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ
ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5
ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ
ಪಂಚನಾದಗಳೆಂಬ ವಾದ್ಯಗಳ ನುಡಿಸಿ
ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ
ರ್ವಂಚನೆಯಿಂದಾರೋಗಿಸೆಂಬೆ 6
ರೇಚಕವೆಂಬ ವ್ಯಜನದಿಂ ಬೀಸಿ
ತಾರಕ ಚಾಮರವ ಪಿಡಿದು
ಕುಂಭಕವೆಂಬ ಪನ್ನೀರಿನಿಂ ತೋಯ್ಸಿ
ತಾರಕ ಬ್ರಹ್ಮನರಸಿಯಂ ಸೇವಿಸುವೆ 7
ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ
ವೈರಾಗ್ಯದ ತಟ್ಟೆಯನು ಪಿಡಿದು
ಭಾವದೀವಿಗೆಯ ಕರ್ಪೂರದಾರಿತಯೆತ್ತಿ
ಬಾಗಿವಂದಿಪೆ ತಾಯೆ ಕರುಣಿಸೆಂದು 8
ವರದಾತೆ ಭೂಜಾತೆ ಸುವಿನೀತೆ ಸುವ್ರತೆ
ವರಶೇಷಗಿರಿವಾಸದಯಿತೆ ಮಹಿತೇ
ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು
ನೆರೆನಂಬಿ ನೆನೆನೆನೆದು ನಲಿವೆನಿಂದು 9