ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ಪ
ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ಅ.ಪ.
`ಆ' ಎನಲು ಶಕ್ತರೇ ಅಜಭವಾದಿಗಳಿನ್ನು
`ನೀ'ಯಾದರದಲ್ಲಿ ಚೇತನರು ಅವರು
`ನಾ'ಯಾತರವನಯ್ಯಾ ನಿನ್ನ ಮಾಯವ ಗೆಲಲು
ಆಯಾಸ ಮೀರಿದುದು ಶ್ರೀ ವರನೆ ದಯೆ ತೋರು 1
ನಿನ್ನ ಚಿತ್ತಕೆ ಬಂದುದೇ ಹಿತವೆಂಬ
ಉನ್ನತ ಮತಿ ನೀಡು ಶರ್ವ ಬಿಂಬ
ಭಿನ್ನ ಭಾವಗಳೊಲ್ಲೆ ಅನಂತಗುಣವನಧಿ
ಮನದಲ್ಲಿ ನೀ ನಿಂದು ವಿಸ್ಮøತಿಯ ಪರಿಹರಿಸು 2
ತವರೂಪ ಧ್ಯಾನಲವ ಬಿಡದೆ ಪೊಂದಿರಲಿ
ನವಭಕ್ತಿ ನಿನ್ನಲ್ಲಿ ಅಚ್ಛಿನ್ನವಾಗಿ
ಪವಮಾನ ಪೂಜಿತ ಜಯೇಶವಿಠಲ
ಭವ ಕಡಲ ದಾಟಿಸೊ ನಿನ್ನವನೆಂದು 3