ರಾಮ ನಿನ್ನ ಭಜನೆಗೈಯುವೆ ಕಾಮಾರಿಮಿತ್ರ
ರಾಮ ನಿನ್ನ ಭಜನೆಗೈಯುವೆ ಪ
ರಾಮ ನಿನ್ನ ಭಜನೆಯನ್ನು ಪ್ರೇಮದಿಂದ ಮಾಳ್ಪ ಜನಕೆ
ಕಾಮಿತಾರ್ಥವಿತ್ತು ಸುಖವ ಪ್ರೇಮದಿಂದಕರುಣಿಸುವವನೆ 1
ಜಾನಕಿಯರಮಣ ನಿನ್ನ ಧ್ಯಾನಮಾಳ್ಪೆನಯ್ಯ ಸತತ
ಸಾನುರಾಗದಿಂದ ಸಲಹು ಭಾನುವಂಶ ಜಲಧಿಚಂದ್ರ 2
ಇಂದಿರೇಶ ನಿನ್ನ ಪಾದವಿಂದು ಪೂಜೆಗೈವೆ ನಾನು
ತಂದೆ ಸಲಹೊ ರಾಗದಿಂದ ಸುಂದರಾಂಗ ಸುಪ್ರಸನ್ನ 3
ಹಾರ ಕುಂಡಲಾದಿಭೂಷ ಚಾರುಮಕುಟಧರಸುಶೋಭ
ಸಾರಸಾಕ್ಷ ರವಿಜವರದ ತೋರೋ ಮುಖವ ರಾಘವೇಂದ್ರ 4
ರಾವಣಾದಿ ಸಕಲದನುಜ ಜೀವಹರಣ ರಘುಕುಲೇಶ
ಪಾವಮಾನಿ ಪೂಜಿತಾಂಘ್ರಿ ಧೇನುಪುರನಿವಾಸ ದೇವ 5