ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ
ಬೇಡದಿರಲಾರೆ ಮಾಂಗಿರಿಯರಂಗ ಪ
ಬೇಡುವನ ಕೈ ಕೀಳು ನೀಡುವನ ಕೈ ಮೇಲು
ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ
ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ
ಜ್ಞಾನಕೆ ಸಿಗುವೆಯೋ ನಾನರಿಯೆನು
ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ
ಜ್ಞಾನಾನುಭವವಿಲ್ಲ ಆಧಾರವಿಲ್ಲ 1
ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು
ನಾನಳುವೆನನವರತ ಶ್ವಾನದಂತೆ
ಸೂನು ಬಾ ಬಾರೆಂದು
ಸಾನುರಾಗದಿ ರಮಾದೇವಿ ಸಂತೈಪಳು 2
ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು
ಎನ್ನ ಕಳುಹುತ ನಿನಗೆ ಎನ್ನ ತೋರ್ದು
ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ
ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ 3