ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ ಗುರು ರಾಘವೇಂದ್ರಾರ್ಯನೇ ಪ. ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ ಭವ ಬಂಧ ಬಿಡಿಸೋ ಅ.ಪ. ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ ಸಂಚಿತನೆ ಎನೆ ನೆಲಸೋ ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ ಪಂಚ ಭೇದಾರ್ಥ ತಿಳಿಸೊ ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ 1 ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ ನೀ ನಿರ್ಮಲದಲಿ ನೆನೆವೆ ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ ಕಾಮಿಸಿದ ಭಕ್ತಗೀವೆ ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ 2 ತರಳತನದಲಿ ಶ್ರೀ ನರಹರಿಯ ಭಜಿಸುತ್ತ ಉರುತರದಿ ಭಾದೆ ಸಹಿಸಿ ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ ಉರ್ವಿಯೊಳಗೆಲ್ಲ ನೆಲಸಿ ಸಿರಿ ಕೃಷ್ಣನಾ ಭಜಿಸಿ ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ 3 ತುಂಗ ತೀರದಿ ನಿಂದು ಮಂಗಳರೂಪದಲಿ ಪಂಗು ಬಧಿರರ ಸಲಹುತ ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ ಮಂಗಳರೂಪ ಭಜಿಸಿ ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ 4 ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ ಪಾದ ಮೌಳಿ ನೋಳ್ಪೆ ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು ತಾಪಪಡಲಾರೆ ಭವದಿ ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ5
--------------
ಅಂಬಾಬಾಯಿ
ಬಂದನಿದಕೋ ರಂಗ ಬಂದನಿದಕೋ ಸುಂದರಾಂಗನು ನಮ್ಮ ಮಂದಿರಕೆ ಈಗಾ ಪ. ಮುಗಳುನಗೆ ಮುಖದಲ್ಲಿ ಮುಂಗುರುಳು ನವಿಲುಗರಿ ಕಂಬು ಕಂಠಾ ಝಗ ಝಗಿಪ ಕುಂಡಲವು ಕಸ್ತೂರಿ ತಿಲಕ ಫಣಿ ನಗಧರನು ನಮ್ಮ ಮನಸೂರೆಗೊಂಬುದಕೇ 1 ಕರದಲಿ ಕಂಕಣವು ಬೆರಳಲ್ಲಿ ಉಂಗುರವು ಕೊರಳಲ್ಲಿ ನವರತÀ್ನ ಮುತ್ತಿನಹಾರಗಳೂ ಕಿರುಗೆಜ್ಜೆ ನಡುವಿನಲಿ ವಲಿವೋ ಪೀತಾಂಬರವು ವರ ವೇಣು ವಯ್ಯಾರದಿಂದ ಊದುತಲೀ 2 ಸುರರ ವಂಚನೆಗೈದು ವರ ಋಷಿಗಳನೆ ಜರಿದು ಸಿರಿಗಗೋಚರನೆನಿಸಿ ಪರಮ ಪುರುಷಾ ವರಧಾಮತ್ರಯಗಳನೂ ಮರದೆಮ್ಮ ಗೋಕುಲದಿ ಚರಿಯ ತೋರೀ 3 ಇಂದಿರೇಶನು ನಮ್ಮ ವೃಂದಾವನದೊಳಿಪ್ಪ ಮಂದಿಗಳ ಮನ ಸೆಳೆದು ಮಾರಜನಕಾ ಒಂದೊಂದು ರೂಪಿನಲಿ ಗೋಪಿಕಾ ಸ್ತ್ರೀಯರೊಳು ಬಂದು ಬೆರೆಯುವ ಮದನಕಲೆ ನಿಪುಣ ಚೆಲುವಾ 4 ಗೋವರ್ಧನೋದ್ಧಾರ ಗೋವಳರ ವಡಗೂಡಿ ಗೋಪಿ ಬಾಲಾ ಗೋವಿಂದ ಗೋಪಾಲಕೃಷ್ಣವಿಠಲ ನಮ್ಮ ಪೂರ್ವ ಪುಣ್ಯದ ಫಲದಿ ಭೂವನಿತೆ ಪಾಲಾ 5
--------------
ಅಂಬಾಬಾಯಿ