ಅತ್ಯಾಸೆಪಡಬೇಡ ಅಸ್ಥಿರ ಸಂಸಾರ ಮತ್ತನಾಗದಿರೆಲವೊ ಪ
ವೆತ್ಯಸ್ತ ಸ್ಥಿತಿಯಿಂದಾನಿತ್ಯಾ ಶರೀರವಿದು ಅ.ಪ
ಜನರಾಡುವುದು ಕೇಳಿ ಮನಕೆ ಬಂದುದ ಕೋರಿ
ಅನುಮಾನ ಚಿತ್ತನಾಗಿ
ವನಿತೆಯರ ಬಲೆಯೊಳು ಸಿಲುಕಿ ಮೋಹಭ್ರಾಂತಿ
ವಶನಾಗಿ ಧರ್ಮಾಧರ್ಮಗಳ ತಿಳಿಯದೆ 1
ಹೇಯ ಸುಖವ ಬಯಸಿ ಆಯಾಸ ಪಡುತಲಿ
ಬಾಯ ಬಿಡುತ ಸತತ
ನೋಯುತಾ ನುಡಿಯುತ ಕ್ರೋಧ ಲೋಭದಿ ಮುಳುಗಿ
ನಾಯಿಯಂದದಿ ತಿರಿಗಿ ನಾನಾ ವಿಧದಲಿ 2
ದಾನಧರ್ಮಗಳಿಲ್ಲ ಜ್ಞಾನಸತ್ಯಗಳಿಲ್ಲ
ಧ್ಯಾನವು ಮೊದಲೇ ಇಲ್ಲ
ಮಾನಾಭಿಮಾನ ಅಜ್ಞಾನದಿ ಮುಳುಗಿ 3
ಪರರೊಡೆವೆಯ ತಂದು ಒಡಲ ಹೊರೆಯುತಲ-
ನೆರೆಹೊರೆ ನೋಡಿ ಅವರಂತೆ ನಾನಿರಬೇಕೆಂದ 4
ಕರ್ಮ ಭಿನ್ನಇವರಿಗೆಲ್ಲ
ಮುನ್ನಿನ ಕರ್ಮದಿ ಫಲ
ಬೆನ್ನಬಿಡದು ಎಂದು ಪೇಳುವ ಶಾಸ್ತ್ರಗ-
ಳನ್ನು ನಂಬದಲೆ ನಿನ್ನನ್ನೆ ನೀ ಪೊಗಳಿ ಕೊಂಡು 5
ನ್ಯಾಯಾರ್ಜಿತ ದ್ರವ್ಯದಿಂದ ಕಾರ್ಯಗಳವು-
ಪಾಯದಂದಲಿ ನಡೆಸಿ
ತಾಯಿ ಮಕ್ಕಳ ನೋಡುವಂತೆ ದೀನರಿಗೆ ಸ-
ಹಾಯ ಮಾಡುತ ಜ್ಞಾನಿಗಳ ಸೇವಿಸುತಿಹರು 6
ಪೊರೆವೊ ಭಾರಕರ್ತ ಗುರುರಾಮವಿಠಲ ತಾ
ಶರಣಾದವರಿಗೆ ಭಯವೇನು ಸ್ವಾಮಿ
ಸರ್ವರ ಪಾಲಿಸುವನು ನಿನ್ನನು ಮಾತ್ರ ಬಿಡುವನೆ 7