ಬಂದಿರುವೆನು ಭೂಜಾತೆ | ಶರ-
ದಿಂದುವದನೆ ವೋ ಸೀತೆ ಪ
ಕೂಗುವುದೇತಕೆ ನಿಮ್ಮಯ ಪೆಸರೇ
ನೀಗ ತಿಳಿಸಿರೈ ಸ್ವಾಮಿ | ನುಡಿ
ಭಾಗವತ ಜನಪ್ರೇಮಿ ಅ.ಪ
ಹೀನತಮವ ಮುರಿದಜಗೆ ಶೃತಿಗಳಿತ್ತ
ಮೀನಾವತಾರನೆ ನಾನು | ಬಾ
ಜಾನಕಿ ಬೇಗನೆ ನೀನು
ಮೀನಾದರೆ ನೀರೊಳಗಿರುವುದು ಸರಿ
ಮಾನಿನಿಯಲಿ ಕಾರ್ಯವೇನು | ನಡಿ
ದೀನ ಜನರ ಸುರಧೇನು 1
ಕಮಲನಯನೆ ನಾ ಪೂರ್ವದಿ | ಗಜ-
ಗಮನೆಯೆ ನೋಡನುರಾಗದಿ
ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ
ಸಮಳೆ ನಿನಗೆ ನೀ ನೋಡು | ಸಂ
ಭ್ರಮವಿದ್ದಲಿ ನಲಿದಾಡು 2
ವರಹಾರೂಪನೆ ಕಾಮಿನಿ | ಓ
ತರುಣಿಯರೊಳಗೆ ಶಿರೋಮಣಿ
ವರಾಹನಾದರೆ ಅಡವಿಯ ತಿರುಗುತ-
ಲಿರದೇತಕೆ ಇಲ್ಲಿ ಬಂದೆ | ನಡಿ
ಪರಿಪರಿ ಮೃಗಗಳ ಹಿಂದೆ 3
ಕರುಳ ಬಗೆದ ನರಸಿಂಹ | ನಾನು
ಪರಮ ಪುರಷ ಪರಬ್ರಹ್ಮ
ನರಸಿಂಹನು ನೀನಾದರೆ ನಡಿನಡಿ
ಗಿರಿಗುಹೆಯೊಳಗಿರು ಹೋಗೈ | ಬಹು
ಪರಿನುಡಿಗಳು ನಿನಗೇಕೈ 4
ಭೂಮಿಯ ದಾನವ ಬೇಡಿ ಬಲಿಯ ಗೆದ್ದ
ವಾಮನ ನಾನೆಲೆ ನಾರಿ | ಸು
ತ್ರಾಮಾದ್ಯರಿಗುಪಕಾರಿ
ಬ್ರಾಹ್ಮಣನಾದರೆ ನಮಿಸುವೆ ಚರಣಕೆ
ಹೋಮಧ್ಯಾನ ಜಪಮಾಡೈ | ನಿ
ಷ್ಕಾಮ ಜನರ ಪಥನೋಡೈ 5
ದುರುಳನೃಪರ ಸಂಹರಿಸವನಿಯ ಭೂ
ಸುರರಿಗೆ ಕೊಟ್ಟೆನೆ ದಾನವು | ಕೇಳ್
ಪರಶುರಾಮಾಭಿದಾನವು
ವರಮಾತೆಯ ಶಿರವರಿದವ ನೀನಂತೆ
ಸರಸವೇತಕೆನ್ನಲ್ಲಿ | ಮನ
ಬರುವಲ್ಲಿಗೆ ತೆರಳಲ್ಲಿ 6
ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು
ಪ್ರಿಯದಿ ವನದೊಳಗಿದ್ದೆನೆ | ದೈ
ತ್ಯೇಯ ನಿಕರವನು ಗೆದ್ದೆನೆ
ಸ್ರೀಯರಲ್ಲಿ ಹಿತವೇನು | ಕಮ
ಲಾಯತಾಕ್ಷ ನಡಿ ನೀನು 7
ನಾರಿಯರನು ಕೂಡಿ ರಾಸ ಕ್ರೀಡೆಯೊಳ್
ತೋರಿದೆ ಪರಿಪರಿ ಚಿತ್ರವ | ವಿ-
ಜಾರ ಪುರಷನಿಗೆ ಹೋಲುವಳಲ್ಲವು
ಸಾರ ಪತಿವ್ರತೆ ನಾನು | ಇ-
ನ್ನ್ಯಾರು ತಿಳಿಸು ಮತ್ತೆ ನೀನು 8
ಪತಿವ್ರತೆಯರ ಸದ್ವ್ರತವ ಕೆಡಿಸಿದಾ
ಪ್ರತಿಮ ಬುದ್ಧನೆ ಲತಾಂಗಿ | ಓ
ಮತಿವಂತಳೆ ಮೋಹನಾಂಗಿ
ಕೃತಕವಾಡದಿರು ಒಲ್ಲೆ | ಕೇ
ಳತಿ ಮೋಹಕ ನೀ ಬಲ್ಲೆ 9
ಹಲವು ನುಡಿಗಳೇನು ಕಲಿಯುಗಾಂತದಲಿ
ಮಲೆತ ಮನುಜರನು ಕೊಲ್ವೆನೆ | ಓ
ಲಲನೆ ನೋಡು ಬಲು ಚೆಲ್ವನೇ
ಕಲಿತನವ ತೋರಿಸದಿರು ಈ ಪರಿ
ಹಲವು ವೇಷ ನಿನಗೇಕೆ | ಕೇ
ಳೆಲವೊ ಸ್ವಾಮಿ ನುಡಿ ಜೋಕೆ 10
ವೇಷವಲ್ಲ ಸರ್ವೇಶ ನಾನು ಪರಿ-
ಪೋಷಿಸುವೆನು ನಿಜಭಕ್ತರ | ಸಂ-
ತೋಷಿಸುವೆನು ಧರ್ಮಯುಕ್ತರ
ಪೋಷಿಸುವನು ನೀನಾದರೆಲ್ಲಿ ನಿನ್ನ
ವಾಸಪೇಳು ನಿಜವೀಗಾ | ಪರಿ
ಹಾಸವೇಕೆ ನುಡಿಬೇಗ 11
ಪರಮಾತ್ಮನು ನಾ ಕೇಳೆ | ಎನ್ನ
ಮರತೆಯೇನೆ ಎಲೆ ಬಾಲೆ
ಅರಿತೆನೀಗ ಬಹು ಸಂತಸವಾಯಿತು
ಎರಗುವೆ ಚರಣಕೆ ನಾನು | ನಿನ್ನ
ಸರಿಯಾರೈ ದೊರೆ ನೀನು 12
ಧರೆಯೊಳಯೋಧ್ಯಾ ಪುರದರಸನ ಮಗ
ಗುರುರಾಮವಿಠಲನೆ ನಾನು | ಓ
ತರುಣಿ ನಿನಗೊಲಿದು ಬಂದೆನು
ಧರಣಿ ತನಯೆ ನಸುನಾಚಿಕೆಯಿಂದಲಿ
ಣಗಳನು ತೊಳೆದಳು ಬೇಗ 13