ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ
ದೀನ ವತ್ಸಲ ಸ್ವಾಮಿ ಕೃಷ್ಣ ಪ
ಜ್ಞಾನಗಮ್ಯನೆ ನಿನ್ನ ಕಾಣಲು ಮನದಲ್ಲಿ
ನಿತ್ಯ ಧ್ಯಾನವ ಮಾಡುವರಯ್ಯ ಅ.ಪ.
ಶ್ರುತಿ ಶಾಸ್ತ್ರಗಳನೋದಿ ಮಥನವ ಮಾಡುವ
ಮತಿಸಾಧನದಿಂದ ನಿನ್ನರಸುವರೊ
ಪತಿತಪಾವನ ನಿನ್ನ ಕರುಣವೊಂದಿಲ್ಲದಿರೆ
ಇತರ ಸಾಧನವೆಲ್ಲ ಗತಿದೋರದೋ ಸ್ವಾಮಿ 1
ನಿನ್ನ ಭಕ್ತರು ಮಾಳ್ಪ ಸಾಧನಂಗಳಿಗೆಲ್ಲ
ನಿನ್ನ ಕಾರುಣ್ಯವೇ ಕಾರಣವಲ್ಲವೆ
ನಿನ್ನ ನುತಿಸ ಬಂದ ನರರ ಕ್ಷೇಮದ ಭಾರ
ನಿನ್ನದೆಂದು ತಿಳಿದು ನೀನಾಗಿ ಪೊರೆಯುವೆ 2
ಏನೊಂದು ಸಾಧನವರಿಯದ ಎನಗೀಗ
ನೀನಾಗಿ ದಯಮಾಡಿ ಮೈದೋರಿದೆ
ಏನು ಧನ್ಯನೊ ನಾನು ಆನಂದಕೆಣೆಗಾಣೆ
ದಾನವಾಂತಕ ಸ್ವಾಮಿ ಕರಿಗಿರೀಶನೆ ಕೃಷ್ಣ 3