ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಪ
ಹೇ ದಯಾನಿಧೇ ನಿನ್ನ ಪಾದಾನುಗ್ರಹದಿಂದ ಅ.ಪ.
ಏತರವ ನಾನೆಂದುದಾಸೀನ ಮಾಡದೆಲೆ
ಲೇಸು ಮಮತೆಯ ಕೋರಿ ಈ ಸ್ಥಳಕೆ ಬಂದಿ
ಆಸುರೀ ಭಾವವನು ನಾಶಗೊಳಿಸಿ ಎನ್ನ
ನೀ ಸಲಹಿದೆಯೋ ಜಗದೀಶ ನಿರುಪಮ ಕರುಣಿ 1
ಸತ್ವಗುಣ ಪ್ರಚುರರಲಿ ನೀ ತೋರುವುದಕ್ಕಿಂತ
ಅತ್ಯಧಿಕ ವಾತ್ಸಲ್ಯವೆನ್ನೊಳಗೆ ತೋರ್ಪೆ
ಕರ್ತೃ ನೀನೆಂಬ ತತ್ವ ಮನಸಿಗೆ ತಂದೆ
ಭಕ್ತವಾತ್ಸಲ್ಯಕ್ಕಿದು ಕುರುಹಲ್ಲವೇ ದೇವ 2
ಸುರಲೋಕಕ್ಕಿಂತಧಿಕ ಪದವಿ ಎನಗಿತ್ತೆ
ನಿರುತಲೆನ್ನಯ ಬೆನ್ನು ಕಾಯುತಲಿರುವೆ
ಕರುಣಿಗೆಣೆಗಾಣೆ ಕರಿಗಿರೀಶನೇ ನಿನ್ನ
ಸ್ಮರಣೆಯನನವರತ ಇರುವಂತೆ ಕೃಪೆಮಾಡೋ 3