ಎಂಥ ಶೂರನೊ ರಾಮ ಎಂಥ ಧೀರನೊ ಪ
ಕಂತುಹರನ ಧನುವನೆತ್ತ
ಪಂಥದಿಂದ ಮುರಿದು ಬಿಸುಟ ಅ.ಪ.
ಹಲವು ಶೂರರಾಜರದನು
ಚಲಿಸಲಾಗದ ಧನುವ
ಸುಲಭದಿಂದಲೆತ್ತಿ ಮುರಿದು
ಲಲನೆ ಸೀತೆಯೊಲಿಸಿದವನು 1
ಸಕಲ ಕ್ಷತ್ರಿಯರನು ಗೆಲಿದು
ಪ್ರಕಟನಾದ ಪರಶುರಾಮ
ಶಕುತಿಯನ್ನು ತಾನು ಪರಮ
ಯುಕುತಿಯಿಂದ ಗೆಲಿದು ಬಂದ 2
ಸಾಲು ಶಿರನ ಕೀಟವೆಂದು
ಬಾಲದಲ್ಲಿ ತಂದ ವೀರ
ವಾಲಿಯನೇಕ ಬಾಣದಲಿ
ಲೀಲೆಯಿಂದಲಿರಿದ ಜಾಣ 3
ಹತ್ತನಾಲ್ಕು ಲೋಕಗಳನು
ಸುತ್ತಿಗೆಲಿದು ಖ್ಯಾತನಾದ
ಹತ್ತು ತಲೆಯ ದುಷ್ಟನನ್ನು
ಕತ್ತು ಕಡಿದು ಕೆಡಹಿದವನು 4
ರಾಸಿ ದೈತ್ಯರನ್ನು ಕೊಂಡು
ದೇಶವನ್ನು ಉದ್ಧರಿಸಿದ
ವಾಸವಾದಿ ಸುರನುತ ರಂ-
ಗೇಶವಿಠಲರೇಯನವನು 5