ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೀಸಿದ ಗುಂಡಗೆ ಬುಕ್ಕಿದ್ದೇ ಲಾಭ ಬೇಸರವಿಲ್ಲದೆ ಪ ವಾಸುಕಿಶಯನನ ಲೇಶವು ಭಜಿಸದೆ ಅ.ಪ ಹಗಲು ಇರುಳು ವಿಷಯಗಳಲಿ ಮುಳುಗಿ ಪೊಗಳದಿರಲು ಹರಿ ನಾಮವನು ಜಗದೊಳೆನಗೆ ಸಮರಾರೆಂದೆನುತಲಿ ಬೊಗಳಿ ನರಕಕ್ಕುರುಳುವೆನೆಂದರಿಯದೆ 1 ಮೋಸದಿಂದ ಧನರಾಶಿಗಳಿಸಿ ಅತಿ ಹೇಸಿಗೆ ಭೋಗಗಳಾಶಿಸುವ ಈಶನಂತೆ ಬಲು ಮೆರೆಯುತ ಮದದಲಿ ಶ್ರೀಶ ಸಹಾಯವ ಬಯಸದ ತನಕ 2 ಗಂಗಾ ಶುಚಿಜಲ ದೊರಕುತಿರೆ ಹಲ ವಂಗವ ನೀರನು ಬಯಸುವರೇ ಮಂಗಳ ಕರ್ಮಗಳಾಚರಿಸದೆ ನೀ ಮಂಗನಂದದಲಿ ಕುಣಿಯುವ ತನಕ 3 ಕಂಗಳಿಲ್ಲದ ಕುರುಡನಿಗೆ ಬೆಳ ದಿಂಗಳ ಸೌಖ್ಯವು ತೋರುವುದೆ ರಂಗನ ಮಹಿಮೆಯನರಿಯದ ಮೂಢನು ತಂಗಳು ಭೋಗವ ಬಯಸುವ ತನಕ 4 ಕನ್ನಡಿಯೊಳಗಿನ ಗಂಟಿನಂತಿರುವುದು ನಿನ್ನ ನಶ್ವರದ ಭೋಗಗಳು ಇನ್ನಾದರು ನಿನ್ನ ಮೂಢತನವ ಬಿಟ್ಟು ಸಂತತ ಭಜಿಸೋ ಪ್ರಸನ್ನ ಶ್ರೀಹರಿಯ 5
--------------
ವಿದ್ಯಾಪ್ರಸನ್ನತೀರ್ಥರು