ಎಲ್ಲಿರುವೆ ಬಾರಯ್ಯದೇವ
ಬಲ್ಲಿದ ನೀನೆ ಅನಾಥಜನಜೀವ ಪ
ಪುಲ್ಲನಾಭ ನೋಡೆನ್ನ ಪರಿಭವದ ದು:ಖವನು
ನಿಲ್ಲದೆ ದಯಮಾಡು ಬೇಗದೊಳಭವ ಅ.ಪ
ಕ್ಷಣಕ್ಷಣಕೆ ಒದಗುತಿಹ್ಯ ದಣಿವು ಬೇನ್ಯಾಪತ್ತು
ಅನುಪಮ ಬಡತನದ ಘನ ಘನ ವಿಪತ್ತು
ದಿನದಿನ ಪರರನು ಮಣಿದುಬೇಡುವ ಹೊತ್ತು
ಇನಿತೆಲ್ಲ ಕನಿಕರದಿ ನೀನೆ ಕಳೆಯಭವ 1
ಕನಕ ವಸ್ತ್ರಾಭರಣ ವನಿತೆಗ್ಹಾಕುವ ಚಿಂತೆ
ಧನಧಾನ್ಯವಿಲ್ಲೆಂಬ ಎಣಿಕಿಲ್ಲದ ಚಿಂತೆ
ಮನಕೆ ತುಸುಗೊಡದ ರಿಣಬಾಧದ್ದತಿ ಚಿಂತೆ
ವನಜಾಕ್ಷ ಕೃಪೆಯಿತ್ತು ನೀನೆ ಬಿಡಿಸಯ್ಯ 2
ಧರೆಯಸುಖೆನಗಿಲ್ಲೆಂಬ ಪರಿಪರಿಯು ಉರಿ ತಾಪ
ಪರರಸೇವೆಯ ಮಾಡ್ವ ಪರಮ ಪರಿತಾಪ
ಜರಜರಕೆ ಬಂದು ಆವರಿಸುವುವು ಮಹಪಾಪ
ಪರಹರಿಸೆಲವೋ ಶ್ರೀರಾಮಪ್ರಭು ಭೂಪ 3