ಗತಿಯಾರೋ ಈ ಜಗದಿ ಮತಿಗೆಟ್ಟ ಮನುಜ
ಕ್ಷಿತಿನಾಥ ಹೆಜ್ಜಾಜಿ ಕೇಶವನ ಹೊರತು ಪ
ಸತಿಯ ಪರದೊಳು ನೋಡೆ ಪುಣ್ಯವರ್ಥಕೆ ಕತೆಗೆ
ಸುತರಿರುವರೆಂದೆನಲು ಋಣಮುಗಿವೊವರೆಗೇ
ಅತಿಶಯದ ಬಾಂಧವರು ಮಿತ್ರಮಂಡಲಿಯೆಲ್ಲ
ಸ್ತುತಿಯುಕ್ತ ಮರ್ಯಾದೆ ಪಡೆಕೊಳ್ಳುವನಕ 1
ತಂದೆ ತಾಯಿಗಳೆಲ್ಲ ಮುಂದಳಿದು ಹೋಗುವರು
ಬಂದ ತನ್ನಧಿಕಾರ ಬಲುಮೆಯಿರುವಾಗ
ಬಂದಿದ್ದ ಧನಧಾನ್ಯಗಳು ನಿಲ್ಲದೋಡುವುವು
ಬಂಧನದ ಕಾಲದೊಳಗೊಬ್ಬರೂ ಬರರೂ 2
ಕರಿ ಧ್ರುವನು ಪಾಂಚಾಲಿ ಪ್ರಹ್ಲಾದ ಪ್ರಭೃತಿಗಳ
ಪರಮಪಾವನರೆನಿಸಿ ಪೊರೆದಂಥ ಹರಿಯ
ಉರುತರದ ನೋಟದೊಳು ನಿರುತ ನೆನೆಯಲು ನಿನ್ನ
ಕರಪಿಡಿದು ಕಾಯುವನು ಸುಂದರಶ್ಯಾಮ 3