ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ ಧ್ರುವ
ನುಡಿದವು ಪರಮಾರ್ಥ ನಡೆಯೊಳಗಿಲ್ಲದೆ ನುಡಿದರ್ಥ
ಹಿಡಿದು ವಿಷಯದ ಸ್ವಾರ್ಥಬಡುವುದು ಶ್ರಮತಾನೆ ವ್ಯರ್ಥ 1
ಓದುದು ವೇದಾಂತ ಭೇದಿಸಿ ತಿಳಿಯದೆ ಅದರಂತ
ವಾದ ಮಾಡುದು ಭ್ರಾಂತ ಸಾಧಿಸಿ ನೋಡದು ತನ್ನೊಳು ತಾ 2
ಜನಕೇಳುದು ಬುದ್ದಿ ತನಗ ಮಾಡಿಕೊಳ್ಳದು ಸಿದ್ಧಿ
ಕಾಣದ್ಹೇಳುದು ಸುದ್ಧಿ ಜ್ಞಾನಕ ಬಾರದು ತಾ ತಿದ್ದಿ 3
ತೊಟ್ಟು ಉತ್ತಮ ವೇಷ ಮುಟ್ಟಿಗಾಣದೆ ಸ್ವಪ್ರಕಾಶ
ತುಟ್ಟಿಲಿ ಜಗದೀಶ ಗುಟ್ಟಿಲಿ ಬಲಿವದು ಧನದಾಶೆ 4
ಎಚ್ಚರಿಸಿತು ಖೂನ ನಿಶ್ಚಲ ಮಹಿಪತಿಗೆ ಗುರುಜ್ಞಾನ
ಹುಚ್ಚುಗೊಂಡಿತು ಮನ ನೆಚ್ಚಿ ನಿಜಾನಂದದ ಘನ 5