ಪುಣ್ಯ ಪೂರ್ವಾರ್ಜಿತವಿದು ಸುರ
ಮಾನ್ಯ ಶ್ರೀ ನಿಲಯನ ದರುಶನ ಪ
ಚೆನ್ನಿಗನೀತನು ಸುಜನರ ಪೊರೆಯಲು
ಪನ್ನಗಾಚಲದಿ ಬಂದಿರುವುದು ಬಲು ಅ.ಪ
ರಾಜ್ಯವಿವಗೆ ಹದಿನಾಲ್ಕು ಲೋಕಗಳು
ಭೋಜ್ಯ ಚರಾಚರಜಗವೆಲ್ಲ
ರಾಜೀವಾಲಯನಾಥನಿವನು ಬಲು
ಸೋಜಿಗದಲಿ ಬಂದಿಹ ನೋಡಿ
ಪೂಜ್ಯಚರಣ ಗುರುವ್ಯಾಸರಾಜ ಯತಿರಾಜ
ರಚಿತ ದ್ವಿಕ್ಷಡಬ್ಧದ ಪೂಜೆಯ 1
ಸೌಂದರ್ಯದ ಗಣಿ ಇವನು ಎಲ್ಲರನು
ತಂದೆಯಂತೆ ಸಲಹುವ ಸತತ
ಒಂದೊಂದೆಡೆಯಲು ವ್ಯಾಪ್ತನಿವನು ತಾ
ನೊಂದೆಡೆಯಲು ಸುಲಭದಿ ಸಿಗನು
ನಂದತೀರ್ಥ ಪರಿವಾರ ಜನರು ಇವರೆಂದು ಹರುಷದಲಿ
ಮುಂದೆ ನಿಂತಿಹುದು 2
ಪದ್ಮಾವತಿ ವಲ್ಲಭನಿವ ಮುನಿಜನ
ಹೃದ್ಗತ ಪ್ರಕಟಾಮಿತ ಚರಿತ
ಮುಗ್ಧಜನರು ಪರಮಾದರ ತೋರಲು
ಸ್ನಿಗ್ಧನಾಗುವನು ಹರುಷದಲಿ
ಛದ್ಮಕೆ ದೂರನು ಭಕ್ತ ಪ್ರಸನ್ನನು
ಉದ್ಧರಿಸಲು ಈ ಸದ್ಮಕೆ ಬಂದಿಹ 3