ನಲಿನಲಿದರು ದ್ವಾರಕಾಪುರದಿ
ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ.
ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ
ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ.
ಅಂಬರದಲಿ ಭೇರಿ ವಾದ್ಯಗಳೆಸಗೆ
ತುಂಬುರು ನಾರದರು ಗಾನವ ಪಾಡೆ
ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ
ಅಂಬುಜೋದ್ಭವ ರುಕ್ಮಿಣಿ ಕಂಠದೊಳು 1
ವಿಪ್ರರು ವೇದ ಮಂತ್ರವ ಪಠಿಸೆ
ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ
ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ
ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ 2
ದೇವಕಿ ವಸುದೇವನಿಗ್ಹರುಷವನಿತ್ತು
ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ
ಕಾವ ಸಕಲ ಜೀವರ ಹೃದಯನಿವಾಸ
ದೇವ ಯಶೋದೆ ನಂದ ಕಂದನ ನೋಡಿ 3