ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲೆ ನೋಡಿದರೀಹ್ಯ ಇಲ್ಲೆ ನೋಡಿದರೀಹ್ಯ ಎಲ್ಲಾ ಕಡೆಯಲ್ಲೇಕೋಮಯವೋ 1 ಸುಲ್ಲಭವಾಗಿ ನಮ್ಮ ಫುಲ್ಲಲೋಚನ ಕೃಷ್ಣ ಬಲ್ಲ ಮಹಿಮರಿಗೆ ಭಾಸುವನು 2 ಭೇದಿಸಿ ನೋಡಿರಯ್ಯ ಸಾಧು ಜನರೆಲ್ಲ ಮೇದಿನಿಯೊಳು ಘನತುಂಬಿಹುದು 3 ಕಣ್ಣಾರೆ ಕಂಡೆವಯ್ಯ ಪುಣ್ಯಚರಣಮಹಿಮೆ ಸಣ್ಣ ದೊಡ್ಡದರೊಳು ಸಾಕ್ಷಾತವೊ 4 ನಂಬಿನಡಿಯಲಿಕೆ ಅಂಜುಜಾಕ್ಷನ ಪಾದ ಗುಂಭಗುರುತವಾಗಿದೋರುವದು 5 ಗುರುಕೃಪೆಯಿಂದ ನೋಡಿ ಹರುಷವಾಯಿತು ಜೀವ ಬೆರತುಕೂಡಿತು ಸಮರಸವೊ 6 ಬೆರೆದು ಕೊಡುವದು ಹರಿಯ ಕಟಾಕ್ಷವಿದು ಮರುಳ ಮಂಕಗಳಿದು ಅರಿಯಾವೊ 7 ವದಗಿ ಬಂದತಿದರಿಟ್ಟು ಸದಮಲಬ್ರಹ್ಮಸುಖಾ ಮೊದಲಿನ ಪುಣ್ಯ ಪೂರ್ವಾರ್ಜಿತವೊ 8 ಧನ್ಯವಾಯಿತು ಮೂಢ ಮಹಿಪತಿ ಪ್ರಾಣಜೀವ ಮನವು ಆಯಿತು ಉನ್ಮನವೊ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆ ಹರಿ ಇದ್ದಾನೆ | ಸಿಕ್ಕುವಾ ಸದ್ಗುರು ಕರುಣದಲಿ ಧ್ರುವ ಆದಿ ಅನಾದಿಯ ಹಾದಿ ವಿಡಿದು | ಸಾಧಿಸಿ ನೋಡಿರಯ್ಯ ಸಜ್ಜನರು | ವೇದಾಂತದ ಸುಸಾರವಿದು | ಭೇದಿಸಿದವರಿಗೆ ಭಿನ್ನವಿಲ್ಲ 1 ತನ್ನೊಳಗಾಗಿರಲಿಕ್ಕೆ ಭಿನ್ನವ್ಯಾಕೆ | ಚೆನ್ನಾಗಿ ನೋಡುವದು ಉನ್ಮನದಲಿ | ಇನ್ನೊಬ್ಬರಿಗೆ ತಾ ತಿಳಿಯದು | ಧನ್ಯವಾದರು ಅನುಭವಿಗಳು2 ಸೆರಗು ಸಿಲ್ಕಲಿಲ್ಲ ನಾಲ್ಕರಲಿ | ಅರಹು ಆಗಲಿಲ್ಲ ಆರರಲಿ | ಪೂರಿಸಲಿಲ್ಲ ಭಾವ ಮೂರಾಗಲಿ | ತೋರಿದ ಸದ್ಗುರು ಎನ್ನೊಳಗೆ 3 ಮೋಸಹೋಯಿತು ಜಗ ವೇಷದಲಿ | ವಾಸತಿಳಿಯದೆ ವಾಸುದೇವನ | ಕಾಸಿನ ಆಶೆಗೆ ದಾಸರಾಗಿ | ಘಾಸಿ ಆಯಿತು ಭವಪಾಶದಲಿ 4 ಸಣ್ಣದೊಡ್ಡದರೊಳು ಸಾಕ್ಷವಾಗಿ | ಬಣ್ಣ ಬಣ್ಣದಲಿ ತಾ ಭಾಸುತಿಹ್ಯ | ಕಣ್ಣಾರೆ ಕಂಡು ಗುರು ಕೃಪೆಯಿಂದ | ಧನ್ಯವಾದ ಮೂಢ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಭಾಸ್ಕರ ಪುಣ್ಯ ಪ್ರಭೆಯ ಕೂಡಿ ಧ್ರುವ ಪುಣ್ಯ ಎದುರಿಟ್ಟು ಬಂದು ಮುಂದೆ ಕಣ್ಣಾರೆ ಕಂಡು ತ್ರಾಹಿ ಎಂದೆ ಸಣ್ಣ ದೊಡ್ಡದರೊಳು ವಸ್ತು ಒಂದೆ ಬಣ್ಣ ಬಣ್ಣಾ ಗೀಹ್ಯದರಿಂದೆ 1 ಹೇಳಬಾರದಯ್ಯ ನಿಜವರ್ಮ ಕೇಳಿ ಶ್ರೀಸದ್ಗುರು ಪಾದಧರ್ಮ ಅಳಿಯಿತು ನೋಡಿ ಪೂರ್ವ ಕರ್ಮ ಹೊಳಿಯಿತೆನ್ನೊಳು ಘನ ಬ್ರಹ್ಮ 2 ಸೋಹ್ಯ ದೋರಿ ಕೊಟ್ಟೆನಗಿಂದು ಮಹಿಪತಿಸ್ವಾಮಿ ತಾನೆ ಬಂದು ಈಹ್ಯಪರ ಪೂರ್ಣ ಕೃಪಾಸಿಂಧು ಸಾಹ್ಯ ಮಾಡುತೀಹ್ಯ ದೀನ ಬಂಧು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆವಯ್ಯ ನಿಮ್ಮ ಗುರುಪುಣ್ಯ ಚರಣಮಹಿಮೆ ಮಂಡಲದೊಳು ಗುರುಕೃಪೆಯಿಂದ ದ್ರುವ ಕಣ್ಣಮುಚ್ಚಿದರೆ ತಾ ಕಣ್ಣನೊಳಗದೆ ಕಣ್ದೆರದರೆ ಕಾಣಿಸುತದೆ ಸಣ್ಣ ದೊಡ್ಡದರೊಳು ತುಂಬಿತುಳುಕುತದೆ ಬಣ್ಣ ಬಣ್ಣದಲೆ ಭಾಸುತಲ್ಯದೆ 1 ಆಲಿಸಿಕೇಳಲು ಹೇಳಗುಡುತಲ್ಯದೆ ತಾಳಮೃದಂಗ ಭೇರಿ ಭೋರಿಡುತ ಒಳಹೊರಗೆ ಧಿಮಿಧಿಮಿಗೊಡುತಲ್ಯದೆ ಹೇಳಲಿನ್ನೇನು ಕೌತುಕವ 2 ಸುಳಿ ಸುಳಿದಾಡುತಹೊಳೆಯುತ ಎನ್ನೊಳಗೆ ಥಳಥಳಿಸುವ ತೇಜ:ಪುಂಜವಿದು ಪರಿ ಕಳೆದೋರುತಲ್ಯದೆ ಝಳಝಳಿಸುತ ಎನ್ನ ಮನದೊಳಗೆ 3 ತುತ್ತಾಯಿತಾ ಮಾಡಿನಿತ್ಯ ಸಲುಹುತದೆ ಎತ್ತಹೋದರೆ ತನ್ನಹತ್ತಿಲ್ಯದೆ ದತ್ತವುಳ್ಳವಗೆ ತಾ ಪ್ರತ್ಯಕ್ಷವಾಗ್ಯದೆ ಮೊತ್ತವಾಗ್ಯದೆ ತನ್ನ ನೆತ್ತಿಯೊಳಗೆ 4 ಧನ್ಯಗೈಸಿತು ಎನ್ನ ಪ್ರಾಣ ಜೀವನವಿದು ಚೆನ್ನಾಗಿ ಪೂರ್ಣ ಗುರುಕೃಪೆಯಿಂದ ಕಣ್ಣಾರೆ ಕಂಡೆ ಭಾನು ಕೋಟಿಪ್ರಕಾಶ ನಿಮ್ಮ ಧನ್ಯಧನ್ಯವಾದ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ | ಧನ್ಯ ಧನ್ಯ ಅವ ತನ್ನೊಳು ಸ್ವಹಿತದ | ಕಣ್ಣದೆರೆದು ಗುರುವಿನ್ನರಿತಿಹ ನಿಜ | ಸಣ್ಣ ದೊಡ್ಡದರೊಳು ಘನ್ನವ ನೋಡುತಾ | ಮನ್ನಿಸಿ ಶಾಂತಿಯಲಿನ್ನಿಳಿದವನೇ 1 ವಾದಗಳಳಿದು ಕ್ರೋಧವ ಕಳೆದು | ಸಾಧುರ ಕಾಣುತ ಪಾದಕ ಯರಗುತ | ಮೋದವ ಕುಡುವ ಬೋಧವ ಕೇಳುವ | ಸಾಧನ ನಾಲ್ಕರ ಹಾಧ್ಹಿಡಿದವನೇ 2 ಎಲ್ಲರಿಗೇ ಕಿರಿದೊಳ್ಳಿತೆನಿಸಿ | ಬಲ್ಲತನದ ಗರ್ವೆಲ್ಲವ ತ್ಯಜಿಸಿ | ಸಿರಿ ಫಲ್ಲನಾಭನ ಪದ | ದಲ್ಲೆವೆ ಮನರತಿ ನಿಲ್ಲಿಸಿದವನೇ 3 ಹಂಬಡೆಡಂಬಕ ನೊಬ್ಬರಕೂಡದೇ | ಒಬ್ಬರು ಹೊಗಳಿದರುಬ್ಬದೆ ಮನದಲಿ | ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ | ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ 4 ಒಂದೇ ನಿಷ್ಠಿಯು ಒಂದೇ ಮಾರ್ಗದಿ | ದಂದುಗ ವೃತ್ತಿಗಳೆಂದಿಗೆ ಹೊಂದದೆ | ತಂದೆ ಮಹಿಪತಿ ನಂದನ ಸಾರಿದ | ಬಂದದ ಸಾರ್ಥಕದಿಂದಿದ್ದವನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು