ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆನ್ನ ಕೋಲೆ ಪ ಅಂಜಾನೆ ಗಿರಿಯಲ್ಲಿ | ಸಂಜೀವರಾಯ ಸಹ ಕಂಜನಾಭನಿರುವ | ಅಂಜಿಕ್ಯಾತಕಮ್ಮ 1 ಮೂಡಲು ಗಿರಿವಾಸ | ನಾಡಿಗೊಡೆಯನೆಂದು ಪಾಡುವವರ ದೋಷ | ಓಡಿಸುವನಮ್ಮ 2 ವೆಂಕಟರಮಣನು | ಕಿಂಕರ ಜನಗಳ ಸಂಕಟಗಳ ಕಳೆವ | ಶಂಕೆ ಇಲ್ಲವಮ್ಮ 3 ಈಶ ಶ್ರೀನಿವಾಸ | ದಾಸ ಜನರ ಪೋಷ ರಾಶಿ ದೋಷ ಸುಟ್ಟು | ಲೇಸುಗೈವನಮ್ಮ 4 ಮತ್ಸ್ಯ ಮೂರುತಿ ತ | ನ್ನಿಚ್ಛೆಯಿಂದಲಿ ಬಲು ತುಚ್ಛ ದೈತ್ಯನನು | ಕೊಚ್ಚಿ ಬಿಸುಟನಮ್ಮ 5 ಅಮಿತ ಭಾರ ಪೊತ್ತು ಸುಮನಸರಿಗಮೃತ | ಮಮತೆಲಿತ್ತನಮ್ಮ 6 ಕ್ರೋಡಾಕಾರನಾಗಿ | ರೂಢಿಚೋರನಾದ ಹೇಡಿ ರಕ್ಕಸನ | ತೀಡಿ ಕೊಂದನಮ್ಮ 7 ಘೋರ ರೂಪ ಕೊಂಡು | ಕ್ರೂರ ರಕ್ಕಸನ ದೋರೆ ಕರುಳಕಿತ್ತು | ಪೋರನ ಪೊರೆದನಮ್ಮ 8 ಪುಟ್ಟ ಪೋರನಾಗಿ | ಬೆಟ್ಟದಂತೆ ಬೆಳೆದು ದಿಟ್ಟ ಬಲಿಯ ಶಿರವ | ಮೆಟ್ಟಿ ತುಳಿದನಮ್ಮ 9 ತಾತನ ನುಡಿ ಕೇಳಿ | ಕಾತರನಾಗದೆ ಮಾತೆಯ ಶಿರವನ್ನು | ತಾ ತರಿದಿಟ್ಟನಮ್ಮ 10 ಸೀತೆಯ ಬಿಡಿಸಲು | ಸೇತುವೆಯನು ಕಟ್ಟಿ ಭೂತನನ್ನು ಕೊಂದು | ಖ್ಯಾತಿಗೊಂಡನಮ್ಮ 11 ದ್ವಾರಕಪತಿ ತಾನು | ನಾರಿ ಪಾಂಚಾಲೆಯು ಕೋರಿದ ಕ್ಷಣದಲ್ಲಿ | ಸೀರೆಯ ನೇದನಮ್ಮ 12 ಚಿತ್ತಜನಯ್ಯನು | ಅತ್ತಿತ್ತ ಅಲೆಯುತ ಬೆತ್ತಲೆ ನಾರಿಯರ | ಮುತ್ತುಗೊಂಡನಮ್ಮ 13 ಜಲಜನಾಭನು ತಾ | ಕಲಿಗಾಲ ಕಡೆಯಲ್ಲಿ ಹಲವು ಪಾಪಿಗಳನು | ಫಲದಿ ಕೊಂದನಮ್ಮ 14 ಮುಟ್ಟಿ ಭಜಿಸುವರಿಗೆ | ಇಷ್ಟವಾದ ವರವಕೊಟ್ಟನು ರಂಗೇಶ | ವಿಠಲ ಕೇಳಮ್ಮ 15
--------------
ರಂಗೇಶವಿಠಲದಾಸರು
ದ್ವಾದಶನಾಮ ನಿರ್ವಚನ ಶ್ರೀಕೃಷ್ಣ ನಿನ್ನ ಚರಣಾರವಿಂದಕ್ಕೆರಗಿ ಭಕುತಿಯಿಂ ನಿನ್ನ ಪನ್ನೆರಡು ರೂಪಗಳ ನಾಮ ನಿರ್ವಚನದಿಂ ಕೂಡಿ ನುತಿಸುವೆ ನಾನು ಸರ್ವಸಿದ್ಧಿಯನ್ನಿತ್ತು ಕಾಪಾಡು ಹರಿಯೆ 18 ಸೃಷ್ಟಿಲಯಕಾರಿಗಳು ಬೊಮ್ಮರುದ್ರರು ಇವರೆ ಕೇಶವೆಂಬಕ್ಷರದಿ ಮೆರೆಯುತ್ತಲಿಹರು ವರ್ತನವು ಯಾರಿಂದಲಹುದವನೆ ಪರದೇವ ಕೇಶವಾತ್ಮಕನವನು ಶ್ರೀಕೃಷ್ಣ ದೇವ 19 ನಾರವೆಂದರೆ ದೋಷ ಲೇಶವಿಲ್ಲದ ಗುಣವು ನಾರವೆಂದರೆ ನೀರು ಜೀವನಾಧಾರ ನಾರವಯನವು ಯಾರಿಗವನೆ ನಾರಾಯಣನು ರಜತಪೀಠದ ಪುರದ ಪರದೈವವವನು 20 ಮಾಧವನು ಮಾಲಕುಮಿಗೊಡೆಯನವ ಪರಮಾತ್ಮ ಮಾಯೆಯನು ಎದೆಯಲ್ಲಿ ತಾಳ್ದ ಸಿರಿವರನು ಮಾಯೆಯಿಂದಲಿ ಮಾನವಗೆ ಮುಸುಕನು ಹಾಕಿ ತನ್ನ ರೂಪವನಾರು ನೋಡದಂತಿಹನು 21 ಹಿರಿ ಬೆಟ್ಟವನು ತಾನು ಕಿರಿ ಬೆಟ್ಟಿನಲಿ ಹೊತ್ತು ಗೋವುಗಳ ರಕ್ಷಿಸಿದ ಗೋಪಾಲ ನೀನು ವೇದರಕ್ಷಕನಾಗಿ ಗೋವಿಂದನೆನಿಸಿರುವೆ ಶ್ರೀಕೃಷ್ಣ ನಿನ್ನ ಮಹಿಮೆಯನೇನ ಪೇಳ್ವೆ 22 ಚೇಷ್ಟಕನು ಬಲರೂಪನಾಗಿರುವ ಕಾರಣದಿ ವಿಶ್ವದಲ್ಲೆಲ್ಲು ವ್ಯಾಪಿಸಿರುವುದರಿಂ ವಿಷ್ಣುನಾಮದ ನೀನು ವೈಷ್ಣವರ ಕುಲದೊಡೆಯ ಮಧ್ವಹೃನ್ಮಂದಿರದ ನೆಲೆಯಲ್ಲಿ ಇರುವೆ 23 ಮಧುವೆಂಬ ದೈತ್ಯನನು ಸೃಜಿಸಿಯವನನು ಕೊಂದು ಮಧುಸೂದನನು ಎಂಬ ಬಿರುದು ನೀ ಪೊತ್ತೆ ದುರ್ಜನರ ಸಂಹಾರ ಸಜ್ಜನರ ಉದ್ಧಾರ ಎಂಬೆರಡು ಕಾರ್ಯಗಳಿಗಾಗಿಯವತಾರ 24 ತ್ರೈವಿಕ್ರಮಾವತಾರವ ತಾಳ್ದು ದೇವ ಕಾಲ ತೊಳೆದು ಮೂರು ಲೋಕದ ಭಕುತರಿಗೆ ದರ್ಶನವ ಕೊಟ್ಟು ಭಕ್ತರಕ್ಷಕನಾಗಿ ಮೆರೆದೆ ಸಿರಿವರನೆ25 ವಾಮನನು ನೀನಾಗಿ ವಾಮಪಂಥದಿ ಹೋಗಿ ಬಲಿ ಚಕ್ರವರ್ತಿಯಲಿ ಮೂಹೆಜ್ಜೆ ಬೇಡೆ ಭಕುತಿಯಿಂದವ ಕೊಡಲು ಮುಕುತಿಯನು ಕೊಡಲೆಂದು ಬಲಿಯ ಮನೆಯೂಳಿಗವ ಗೈದೆ ಪರಮಾತ್ಮ26 ಸಿರಿಯನೆದೆಯಲಿ ಪೊತ್ತು ಶ್ರೀಧರನು ನೀನಾಗಿ ಸರ್ವ ಭೂಷಣಗಳಿಂ ಶೋಭಿಸುತಲಿರುವೆ ಅನ್ನದಾತನು ನೀನು ಅನ್ನಭೋಕ್ತøವು ನೀನು ಭುಕ್ತಿ ಮುಕ್ತಿ ಪ್ರದನು ನೀನಿರುವೆ ದೇವ 27 ಇಂದ್ರಿಯಗಳು ಹೃಷೀಕಾಭಿಧಾನದಲಿಹವು ನೀನವುಗಳಿಗೆ ಎಲ್ಲ ಒಡೆಯನಾಗಿರುವೆ ಹೃಷೀಕೇಶ ನಾಮವದು ನಿನಗೊಪ್ಪುವದು ಹರಿಯೆ ನನ್ನ ಮನ ನಿನ್ನಡಿಯೊಳಿರುವಂತೆ ಮಾಡು28 ಸಾಗರವನುದರದಲ್ಲಿರಿಸಿ ನೀನದರಿಂದ ನಾಭಿಯಲಿ ಪದುಮವನು ಸೃಷ್ಟಿಸಿದೆ ದೇವಾ ಪದುಮನಾಭನು ನೀನು ಬೊಮ್ಮಪಿತನಾಗಿರುವೆ ಮಾಯಾ ರೂಪವನೇನಪೇಳ್ವೆ29 ಮೊಸರ ಕುಡಿಕೆಯನೊಡೆದು ತಾಯಿಯಿಂ ಬಂಧಿತನು ದಾಮೋದರನು ಎನಿಸಿ ಉಜಡೆಯನ್ನೊಯ್ದು ಮರಗಳೆಡೆಯಲಿ ಪೊಕ್ಕು ಬೀಳಿಸುತಲವುಗಳನು ಭಕುತರಾ ಶಾಪಮೋಚನೆಯ ನೀ ಮಾಡ್ದೆ30 ಕೇಶವನೆ ಮೊದಲಾದ ಪನ್ನೆರಡು ನಾಮಗಳ ಅರ್ಥವರಿತನವರತ ಪೇಳಲವಗೊಲಿದು ಸಂಸಾರ ಬಂಧನವ ತೊಲಗಿಸಿಯೆ ಪರಮಾತ್ಮ ತನ್ನ ಬಳಿಗೊಯ್ಯುವನು ನಿಜ ಪೇಳ್ವೆ ನಾನು31 ಶ್ವೇತ ರಕ್ತವು ಪೀತ ಕೃಷ್ಣ ವರ್ಣಗಳೆಂಬ ನಾಲ್ಕು ಬಣ್ಣದ ದೇವನೊಬ್ಬನೇ ಇಹನು ಕಲಿಯುಗದ ಕಾಲದಲಿ ಕೃಷ್ಣನೊಬ್ಬನ ನೆನೆದು ನಾಮಜಪ ಮಾಡಿದರೆ ಮುಕ್ತಿಯನು ಕೊಡುವ 32
--------------
ನಿಡಂಬೂರು ರಾಮದಾಸ
ಯಾಕುಪೇಕ್ಷಿಸುವಿ ಕರುಣೈಕನಿಧಿ ನರಸಿಂಹ ವೈರಿ ಪುಂಜನನ ಶ್ರೀಕರನೆ ನೀನೆನಗೆ ಶರಣೆಂದು ನಂಬಿದೆನು ಸಾಕಬೇಕಯ್ಯ ದಾಸರನು ಪ. ಹುಡುಗ ಪ್ರಲ್ಹಾದ ಜಗದೊಡೆಯ ನೀನಹುದೆಂಬ ನುಡಿಯಲಾಲಿಸುತವನ ಪಿತನು ಕಡಿವೆನೆಂದೆದ್ದು ಮುಂದಡಿಯಿಟ್ಟು ಮುಂದರಸಿ ದೃಢ ಮುಷ್ಟಿಯಿಂದ ಖಂಬವನು ಬಡಿಯುತಿರೆ ಶತಕೋಟಿ ಸಿಡಿಲಂತೆ ಗರ್ಜಿಸುತ ಘುಡುಘುಡಿಸಿ ಬಂದು ದೈತ್ಯನನು ಪಿಡಿದೆತ್ತಿ ತೊಡೆಯ ಮೇಲ್ ಕೆಡಹಿ ದಶನಖದಿಂದ ಒಡಲ ಬಗೆದನೆ ನೀಚರನು 1 ನರಸಿಂಹನೆಂಬ ಈರೆರಡು ವರ್ಣವ ಜಪಿಸೆ ದುರಿತ ದೂರೋಡುತಿಹವೆಂದು ಸರಸಿಜೋದ್ಭವ ಶಂಭು ಸುರನಾಥ ಮುಖ್ಯಮುನಿ ವರರು ಕೊಂಡಾಡುತಿಹರಿಂದು ಅರಿತದನು ತ್ವತ್ಪಾದ ಸರಸಿಜವೆ ಶರಣೆಂದು ದೊರೆ ನಿನ್ನ ನಂಬಿಕೊಂಡಿಹೆನು ಅರಿಭಾವ ಸಾಧಿಸುವ ದುರುಳರನು ಪಿಡಿದವರ ಕರುಳ ತೆಗೆದೆತ್ತಿ ಬೀರದನು 2 ಅತಿ ಸೂಕ್ಷ್ಮಯಂದಗ್ನಿ ಗತಿಯನ್ನುಪೇಕ್ಷಿಸಲು ವಿತತವಾಗುವುದು ಕ್ಷಣದೊಳಗೆ ಜತನ ಮಾಡುವರದರ ಗತಿಯನಳಿಸುವುದು ಸ- ಮ್ಮತವಾಗಿರುವುದು ಜಗದೊಳಗೆ ಪತಿತಪಾವನ ಶೇಷಗಿರಿರಾಜ ನೀ ಯೆನಗೆ ಗತಿಯಾಗಿ ಸಲಹುವುದರಿಂದ ವಿತಥಾಭಿಲಾಷೆಯಾತತಾಯಿಗಳ ತ್ವರೆಯಿಂದ ಹತಮಾಡಿಸು ಶ್ರೀ ಮುಕುಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾರು ಬಲ್ಲರು ವೆಂಕಟೇಶ ನಿನ್ನೊಳಿಹ ಚಾರು ಗುಣಶೀಲವೆಂಬ ವಾರಿಧಿಯ ಚಿಪ್ಪಿನೊಳು ಮೊಗೆದು ಬತ್ತಿಸುವಂಥ ವೀರನಾವನು ಜಗದೊಳು ಪ ಹದಿನಾಲ್ಕು ಲೋಕವನ್ನು, ನೀ ನಿನ್ನ ಉದರದೊಳಗಿರಿಸಿಕೊಂಡು ಉದಧಿಮಯವಾಗಿರ್ದ ಕಾಲದೊಳು ನಿನಗೊಂದು ಉದುರಿದೆಲೆಯೊಳು ನಿದ್ರೆಯಂತೆ 1 ಮಾಯೆ ಕಮಲಾಕರದೊಳು, ನಿನ್ನುದರ- ದಾಯತದಿ ತೋರಿ ನಿಲಲು ಮೋಹಿಸಲು ಆ ಕ್ಷಣದಿ ಕಾಯವಾಗಲು ಮೇಲೆ ಬಾಯಿ ನಾಲ್ಕಾಯಿತಂತೆ 2 ಅಲ್ಲಿ ತೋರಿದ ಸೊಲ್ಲನು, ಖಳನೋರ್ವ ನೆಲ್ಲವನು ಸೂರೆಗೊಳಲು ಮಲ್ಲನಾಗಿಯೆ ಜಲದಿ ಘಲ್ಲಿಸಿಯೆ ದೈತ್ಯನನು ಚೆಲ್ವಸಾರವ ಸೆಳೆದೆಯಂತೆ 3 ಅದರ ಆಧಾರದಿಂದ, ಸನಕಾದಿ- ಗುದಯವಾದುದುಯೆಲ್ಲವೂ ಮೊದಲ ಕಾಣದೆ ವೃಕ್ಷವದುರಿ ಬಿದ್ದುದ ನೋಡಿ ತುದಿಯೊಳಗೆ ಕದನವಂತೆ 4 ಒಳ ಹೊರಗೆ ನೀನೊಬ್ಬನೆ, ಹೊಳೆ ಹೊಳೆದು ಸುಳಿವ ಪರಿಯನು ಕಾಣದೆ ಮಲತಾಯಿ ಮಗನೊಳಗೆ ಕಲಹವಿಕ್ಕುವ ತೆರದಿ ಹೊಲಬುದಪ್ಪಿಯೆ ನಡೆವರಂತೆ 5 ಒಂದಿದರಿಂದೆರಡಾದುದು, ಮೂರಾಗಿ ಬಂದು ಇದಿರೊಳು ನಿಂದುದು ಒಂದು ಮಾತಿನೊಳೆರಡು ಸಂದೇಹಗಳ ತೋರಿ ಮಂದ ಬುದ್ಧಿಯ ಕೊಡುವೆಯಂತೆ 6 ಜಡವಾದ ಅಡವಿಯನ್ನು ಸಂಚರಿಸಿ ಒಡಲ ಹೊರೆವುದು ಕಡೆಯೊಳು ಎಡೆಯೊಳೊಪ್ಪಿಸಿ ಕೊಡುವಿಯಂತೆ 7 ನಂಬಿ ಬಂದವರ ನೀನು, ಮನದೊಳಗೆ ಹಂಬಲಿಸಿಕೊಂಡಿರುತಲೆ ಇಂಬಾಗಿ ಇಹಪರದಿ ಉಂಬ ಸಂಭ್ರಮವನ್ನು ಸಂಭವಿಸಿ ತೋರ್ಪೆಯಂತೆ 8 ಭೂಮಿಗೆ ವೈಕುಂಠವೆಂದು, ನಿಂತಿರುವ ಸ್ವಾಮಿಯೆನ್ನೆಡೆಗೆ ಬಂದು ಕ್ಷೇಮವನು ವರಾಹತಿಮ್ಮಪ್ಪ ಕರುಣದಿ ಕಾಮಿತಾರ್ಥವನೀಯೊ ಎಮಗೆ 9
--------------
ವರಹತಿಮ್ಮಪ್ಪ
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು