ಒಟ್ಟು 20 ಕಡೆಗಳಲ್ಲಿ , 13 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(4) ಚನ್ನಾಕೇಶವ ಶರಣು ಶರಣು ಚೆನ್ನಕೇಶವರಾಯ ಚರಣಗಳೇ ಗತಿ ನಂಬಿದೆ ಜೀಯಾ ಪ ತರಳಧ್ರುವನಿಗಿತ್ತೆಯೊ ಬಹುಶ್ರೇಯ ವರದ ವೇಂಕಟ ಶ್ರೀರಂಗ ಚೆಲ್ವರಾಯಾ ಶರಣ ಶ್ರಿತನಭಯಾ ಆನಂದನಿಲಯಾಅ.ಪ ಅಂದುಗೆ ಗೆಜ್ಜೆಯ ಘಲುಘಲು ತುಂದಿಲನಗೆಮೊಸ ಪೀತಾಂಬರದಿಂ ಧಿಂದಿಮಿಕಿಟ ಕುಣಿಗೋವಿಂದಾ ನಿತ್ಯ ಮುಕುಂದ 1 ಕವಿಕುಲಸ್ತುತ್ಯನೆ ದೇವವರೇಣ್ಯ ಭವಸಾಗರ ತಾರಣ ಪ್ರಾವೀಣ್ಯ ಭುವನಗಳೆಲ್ಲಕು ನೀನೇ ಗಣ್ಯ ಪವಿತ್ರಯೋಗಿಯ ಧ್ಯಾನ ಹಿರಣ್ಯ ಪಾವನ ಪುಣ್ಯ ಶ್ರುತಿ ಪ್ರಾಮಾಣ್ಯ 2 ವಿದುರೋದ್ಭವ ಅಕ್ರೂರ ತ್ರಾತ ಮಧುರ ಬಾಂಧವ ಬದರೀನಾಥ ವಿಧಿ ಪಿತನರನಾರಾಯಣ ಪೂತ ಮಧುಕೈಟಭಾರಿ ಬಹುಪ್ರಖ್ಯಾತ ಬುಧಪ್ರೀತ ಭಾಗ್ಯದಾತ 3 ಒಂದೇ ಅಳತೆಗೆ ಜಗವು ಮೂರಡಿ ಚಂದಿರ ಮುಖಿಮಣಿ ಕೊಟ್ಟನು ಕರಡಿ ನಿಂದೆಯಾ ಕಾಳಿಂಗನ ಮೇಲ್ಗಾರುಡಿ ತಂದೆ ಕರೆದನ ಕರುಣದಿ ಕರಪಿಡಿ ಇಂದೆ ಕಡೆಜನ್ಮಮಾಡಿ ಇಡು ನಿನ್ನಪದದಡಿ4 ಹೆಜ್ಜಾಜೀಶ್ವರ ಶಿವ ಶಂಕರನೆ ಸಜ್ಜನ ಮುನಿಗಣ ಹೃದ್ಭಾಸ್ಕರನೆ ದುರ್ಜನಶಿರಹರ ಶಂಖಚಕ್ರಧರ ವಜ್ರಿ ಅಜಹರಗಾಧಾರ ಧೀರ ಸುಜಯ ಭೂಮ್ಯೋದ್ಧಾರಿ ಜಂiು ಶ್ರೀಕರ 5
--------------
ಶಾಮಶರ್ಮರು
(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ- ದುದ್ದಂಡ ದೇವವರೇಣ್ಯ ತಾಪತ್ರಯಗಳಘ ಹಿಂಡು ಓಡಿಸು ರನ್ನ ಪೊರೆ ಸುಪ್ರಸನ್ನ ಪ. ಕಂಡೆ ನಿನ್ನಯ ಬಾಲರೂಪವ ಪುಂಡರೀಕದಳಾಯತಾಕ್ಷನೆ ಕುಂಡಲೀಶಯ ನಿನ್ನ ಚರಣದಿ ದಂಡವಿಕ್ಕುವೆ ಗೋಪಿಬಾಲ ಅ.ಪ. ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ ಜನಮ ಜನುಮದ ಕರ್ಮಗಳ ನಾ ಅನುಭವಿಸಿ ಪೂರೈಸಲಾಪೆನೆ ಘನಮಹಿಮ ದಯ ಮಾಡಿದಲ್ಲದೆ ಕೊನೆಯ ಕಾಣೆನು ವಿಷಯ ವಾಸನೆ ವನಜ ಸಂಭವ ಪವನ ರುದ್ರಾ ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು ನಿನಗೆ ವಿೂರಿದರುಂಟೆ ದನುಜದಲ್ಲಣ ದಯದಿ ಸಲಹೊ 1 ಕಾಮಪಿತ ಮಧ್ವೇಶ | ಸೌಂದರ್ಯ ಸಾರ ತಾಮಸರ ವಿಧ್ವಂಸ | ಸಜ್ಜನರ ಕಾಯುವ ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ ಹೋಮಕುಂಡದಿ ಪುಟ್ಟಿದಾ ಸತಿ ಕಾಮಿಗಳ ಉಪಟಳಕೆ ಸಹಿಸದೆ ಶ್ರೀ ಮನೋಹರ ಕಾಯೊ ದ್ವಾರಕೆ ಧಾಮ ನೀ ಗತಿ ಎನುತವರಲೆ ಪ್ರೇಮದಿಂದಕ್ಷಯವನಿತ್ತ ನಾಮ ಮಂಗಳ ನಿರ್ಮಲಾತ್ಮಕ ಸೋಮಶತಪ್ರಭ ಸೌಮ್ಯರೂಪ ತ್ರಿ- ಧಾಮ ಭಕ್ತರ ಕಾಮಿತಾರ್ಥನೆ 2 ಆದಿಮಧ್ಯವಿದೂರ | ಆನಂದ ಪೂರ್ಣ ಸಾಧು ಮನದಿ ವಿಹಾರ | ಸರ್ವಜ್ಞರಾಯರ ಹಾದಿ ತೋರಿಸೊ ಧೀರ | ಸುಜ್ಞಾನಸಾರ ವೇದ ಶಾಸ್ತ್ರಗಳರ್ಥವರಿಯೆನು ಮಾಧವನೆ ಮಮಕಾರದಲಿ ನಾ ಹಾದಿ ತಿಳಿಯದೆ ನೊಂದೆ ಅಜ್ಞತೆ ಹೋದಡಲ್ಲದೆ ನಿನ್ನ ಕಾಣುವ ಮೋದ ಬರುವುದೆ ಮಧ್ವವಲ್ಲಭ ಭೇದ ಮತಿ ಕೊಡು ತಾರತಮ್ಯದಿ ನೀ ದಯದಿ ಒಲಿದೆನ್ನ ಮನದಲಿ ಆದರದಿ ನೆಲೆಸಿನ್ನು ಪೊಳೆಯೊ 3 ಕಡಲಶಯನನೆ ಶ್ರೀಶ | ಕಡಗೋಲ ಕೈ ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ- ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ ಕೊಡುತ ಮಧ್ಯದಿ ತಡೆವ ಸಂಸೃತಿ ತಡೆದು ಸಂತ ಚಿಂತನೆಯ ದೃಢ ಒಡಲೊಳಗೆ ನೆಲೆಸಯ್ಯ ಬಿಡದೆ ಪತಿ ಸತಿ ಪಿತ ಕಡಲವಾಸನೆ ಕಡಲ ಬಂಧನ ಕಡಲ ಮಧ್ಯದಿ ಪುರವ ರಚಿಸಿದೆ ಕಡು ದಯಾಂಬಯಧೆ ಕಾಯೊ ಸತತ 4 ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ ಕೊಟ್ಟೆ ಮನು ಮುನಿಗಳಿಗೆ ಜ್ಞಾನವ ತುಷ್ಟಿಪಡಿಸುತÀ ಸುರರ ಸುಧೆಯಲಿ ಕುಟ್ಟಿ ಅಸುರನ ಕೋರೆದಾಡಿಲಿ ಕುಟ್ಟಿ ಅರಸರ ಕಟ್ಟಿ ಜಟೆಯನು ಮಟ್ಟಿ ಕಂಸನ ಬಿಟ್ಟು ವಸನವ ದಿಟ್ಟ ಕಲ್ಕಿ ಗೋಪಾಲಕೃಷ್ಣ ವಿಠ್ಠಲನೆÀ ಶ್ರೀ ಉಡುಪಿಲೋಲ5
--------------
ಅಂಬಾಬಾಯಿ
ಧನ್ಯನಾದೆನು ವಿಠಲನ ಕಂಡು ಓಡಿತು ಅಘದ್ಹಿಂಡು ಪ ಧನ್ಯನಾದೆನೂ ಕಾಮನ್ನ ಪಿತನ ಲಾ ವಣ್ಯ ಮೂರುತಿಯ ಕಣ್ಣಿಲೆ ಕಂಡು ಅ.ಪ. ದೇವವರೇಣ್ಯ ಸದಾ ವಿನೋದಿ ವೃಂ ದಾವನ ಸಂಚರ ಗೋವನ ಕಂಡು 1 ಮಂಗಳಾಂಗ ಕಾಳಿಂಗ ಮಥsÀನ ಮಾ ತಂಗವರ ವರದ ರಂಗನ ಕಂಡು 2 ಹಾಟಕಾಂಬರ ಕಿರೀಟ ಸಾರಥಿ ತಾಟಕಾರಿ ವೈರಾಟನ ಕಂಡು 3 ಚಿಂತಿತ ಫಲವ ಕೃತಾಂತನಾತ್ಮಜಾ ದ್ಯಂತರಹಿತ ನಿಶ್ಚಿಂತನ ಕಂಡು 4 ಮಾತುಳಾಂತಕ ವಿಧಾತಪಿತ ಜಗ ನ್ನಾಥ ವಿಠಲ ವಿಖ್ಯಾತನ ಕಂಡು 5
--------------
ಜಗನ್ನಾಥದಾಸರು
ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ ತರಳ ಪ್ರಹ್ಲಾದನ್ನ ನುಡಿಯಾ ಕೇಳಿ ತ್ವರಿತದಿ ಬಂದ್ಯೊ ಎನ್ನೊಡೆಯ ನಾನು ಕರುಣಾಳೊ ಭಕ್ತರ ಭಿಡೆಯ ಮೀರ ಲರಿಯೆ ಎಂದೆಂದು ಕೆಂಗಿಡಿಯ ಅಹ ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ 1 ಪ್ರಳಯಾಂಬುನಿಧಿ ಘನಘೋಷದಂತೆ ಘುಳಿ ಘುಳಿಸುತಲಿ ಪ್ರದೋಷ ಕಾಲ ತಿಳಿದು ದೈತ್ಯನ ಅತಿರೋಷದಿಂದ ಪ್ಪಳಿಸಿ ಮೇದಿನಿಗೆ ನಿದೋಷ ಅಹ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ 2 ಕ್ರೂರ ದೈತ್ಯನ ತೋರಗರುಳಾ ತೆಗೆ ದ್ಹಾರ ಮಾಡಿದೆ ನಿಜಕೊರಳ ಕಂಡು ವಾರಿಜಾಸನ ಮುಖದಯರ್ಕಳ ಪುಷ್ಪ ಧಾರಿಗೆರೆದು ವೇಗ ತರಳಾ ಆಹ ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ ರೋರುಹಾವನು ಕಾಯ್ದೆ ಕಾರಣ್ಯನಿಧಿ 3 ಜಯಜಯ ದೇವವರೇಣ್ಯ ಮಹ ದ್ಭಯ ನಿವಾರಣನೆ ಅಗಣ್ಯ ಗುಣಾ ಶ್ರಯ ಘೋರ ದುರಿತಾರಣ್ಯ ಧನಂ ಜಯ ಜಗದೇಕ ಶರಣ್ಯ ಅಹ ಲಯವಿವರ್ಜಿತ ಲೋಕ ತ್ರಯ ವ್ಯಾಪ್ತ ನಿಜಭಕ್ತ ಪ್ರಿಯ ಘೋರಮಯ ಹರ ದಯ ಮಾಡೆನ್ನೊಳು ಲಕ್ಷ್ಮೀ 4 ಕುಟಲ ದ್ವೇಷದವನು ನೀನಲ್ಲ ನಿನ್ನಾ ರ್ಭಟಕಂಜಿದರು ಸುರರೆಲ್ಲ ನರ ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ ಸಟಿ ಕಾಣೆನಪ್ರತಿಮಲ್ಲ ಅಹ ವಟಪತ್ರಶಯನ ಧೂ ರ್ಜಟಿವಂದ್ಯ ಜಗನ್ನಾಥ ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ5
--------------
ಜಗನ್ನಾಥದಾಸರು
ಪನ್ನಗಾಚಲವಾಸ-ಪ್ರಪÀನ್ನರ ಪಾಲಕ ಶ್ರೀಶಾ-ಸರ್ವೇಶಾ ಕನಕ ರತುನಮಯ ಮುಕುಟಾಧಾರ ಘನ ನವಮಣಿಮಯ ಕುಂಡಲಧರ ಇನಕೋಟಿಪ್ರಭಕೌಸ್ತುಭಹಾರ ಮನಸಿಜಧನುಸಮ ಭ್ರೂಸಮಾಕಾರ ಘನ ಚಂಪಕಗೆಣೆ ನಾಸ ಗಂಭೀರ ವನಜದಳಾಯತೇಕ್ಷಣಾಕಾರ ವನರುಹಾ ಘನ ಸ್ಮಿತ ಸುಗಂಭೀರ ಮುನಿಮಾನಸಮಂದಿರ ಸುವಿಹಾರ ಅಪ್ರಾಕೃತ ಶರೀರ ತನುಮನ ವಚನದಿ ಅನವರತದಿ ಕಿನ್ನರ ಸುರಮುನಿಗಣ ತನುಸದನದಿ ಹೃದ್ವನಜದಿ ಘನಪದ ವನರುಹ ಧೇನಿಸಿ ದೃಢಸ್ನೇಹದಿಂದಿರುವ ಕರ್ಮ ಒಪ್ಪಿಸುವ ಘನಮೋದದಿಂದಲಿರುವಾ ನುತಿಸುವಾ ಬೇಡುವಾ ಜನುಮ ಸ್ಥಿತಿ ಮೃತಿಗೆ ಬೆದರದಿರುವಾ ನಿನ್ನವರೊಳು ತನ್ನಿರವ ತೋರಿಸುಹ ಘನ್ನಪಾತಕವ ಕಳೆದುನ್ನತ ಸಾಧನವನ್ನೆ ಕೊಟ್ಟು ನನ್ನಿಯಿಂದಲೆ ಪೊರೆವಾ ತನ್ನಧಾಮದಿ ಕಾಪಿಡುವಾ 1 ಉತ್ತಮ ಮೌಕ್ತಿಕ ಸರಿಗೆ ನ್ಯಾವಳ ಒತ್ತೊತ್ತಾಗಿಹ ತ್ರಿವಳಿಯ ಮಾಲಾ ರತುನ ಪದಕದಾ ಸರದ ವಿಹಾರ ಅತಿಮನೋಹರ ಹೃದಯ ವಿಶಾಲ ಸಲೆಸಿರಿವತ್ಸ ವಕ್ಷದಿ ಲೋಲ ಸುತ್ತಿದ ಭಾಪುರಿ ಭುಜದ ವಿಸ್ತಾರ ಸಿತಾನಿಸಿತ ಉಪವೀತದಿ ಲೊಲ ದಾತಾಪಿತ ತವನಾಭಿಯ ಕಮಲ ಉತ್ತಮಕಮಲ ಕಲ್ಹಾರದ ಮಾಲ ಹಸ್ತಾಭರಣದಿ ಮೆರೆಯುತ ಪೊತ್ತಿಹ ಚಕ್ರಾಧ್ಯಾಯುಧನೆತ್ತಿ ದುರುಳೊನ್ಮತ್ತರ ಸದೆದು ತ್ವದ್ಭಕ್ತರ ಮನೋರಥ ಪೂರ್ತಿಗೈವ ಪುರುಷೋತ್ತಮ ಭವಭಯಹಾರೀ ನಿತ್ಯನೂತನವಿಹಾರೀ-ಪ್ರಣವಸ್ತನೆ ನೀ ಕಂಸಾರೀ ಪೃಥಕ್ ಪೃಥಕ್ ತದಾಕಾರೀ-ನರಹರೀ-ಶ್ರೀಹರೀ ಹೃತ್ಪುಷ್ಕರದಳ ವಿಹಾರೀ ಭಕ್ತವತ್ಸಲ ಅವ್ಯಕ್ತನೆ ಜಗದುತ್ಪತ್ತಿ ಸ್ಥಿತಿಲಯ ಕರ್ತ ವ್ಯಾಪ್ತ ನಿರ್ಲಿಪ್ತ ಸತ್ಯಸು- ಹೃತ್ತಮ ನೀನೆ ಮುರಾರೀ ಉತ್ತಮ ಸಮರಹಿತ ಶೌರೀ 2 ಪಕ್ಷಿಧ್ವಜ ಸುಖಭರಿತ ವಿಹಾರ ಕುಕ್ಷಿಯೊಳು ಅಬ್ಜಾಂಡಕೋಟಿಗಾಧಾರ ತ್ರಕ್ಷಾದ್ಯಮರನುತ ಗುಣಾಧಾರ ಸಾಕ್ಷಿಮೂರುತಿ ಸರ್ವಕಾಲಾಧಾರ ವಕ್ಷದೊಳು ಶ್ರೀವತ್ಸ ಗಂಭೀರಾ ಮು- ಮುಕ್ಷುಗಳೊಡೆಯನೆ ವೈಕುಂಠಾಗಾರ ಅಕ್ಷರಕ್ಷರರವಿಲಕ್ಷಣಧೀರ ರಕ್ಷಕ ಭಕುತಜನರುದ್ಧಾರ ದಕ್ಷಿಣಾಕ್ಷಿಕಂಠ ಹೃದಯವಿಹಾರ ರಕ್ಷಕ ತ್ರಿಜಗದಾಧ್ಯಕ್ಷ ಕರುಣಕಟಾಕ್ಷದಿ ಈ ಜಗ ವೃಕ್ಷದೊಳು ನಿರಪೇಕ್ಷನಾಗಿ ಫÀಲಭಕ್ಷಿಪ ಜೀವರ ಲಕ್ಷಕೋಟಿ ನೀ ಸಾಕ್ಷಿಯಾಗಿಹೆ ನೀ ರಕ್ಷ ಕಮಲಾಕ್ಷ ಪಕ್ಷಿವಾಹನನೆ ನಿನ್ನ ಪರೋಕ್ಷಾಪೇಕ್ಷಿಗಳಿಗೆ ನಿನ್ನ ಕ- ಟಾಕ್ಷವೀಕ್ಷಣದಿಂದ ಪ್ರತ್ಯಕ್ಷ ರಿಪುಶಿಕ್ಷ ಅಧ್ಯಕ್ಷ ಸಾಕ್ಷಿಯಾಗಿಹೆ ನೀ ರಕ್ಷಾ ಮೋಕ್ಷ ಜೀವರಿಗಪರೋಕ್ಷವನಿತ್ತು ನಿ- ಷ್ಪಕ್ಷನಾಗಿ ಜಗರಕ್ಷಿಸುತ್ತ ಸುರಪ ದಕ್ಷ ಚತು- ರಾಕ್ಷರಸ್ಥ-ನರಹರ್ಯಕ್ಷ ಶರಣಜನರ ಕಲ್ಪವೃಕ್ಷ3 ಪಟುತರಾಂಗ ಸುಕಟಿಯ ವಿಸ್ತಾರ ತೊಟ್ಟಿಹÀರತುನದ ಪಟ್ಟವಿಹಾರ ಉಟ್ಟಿಹ ಪಟ್ಟೆ ಪೀತಾಂಬರ ಧಾರಾ ಬಟ್ಟ ಜಾನುದ್ವಯ ಜಂಘಾಶೂರ ಇಟ್ಟಿಹ ಸಾಲಿಗ್ರಾಮದ ಹಾರ ದಟ್ಟವಾಗಿಹ ಕಾಲಂದಿಗೆಯ ವಿಹಾರ ಇಟ್ಟಿಹ ಬೆರಳಲಿ ರತ್ನದುಂಗುರ ಶ್ರೇಷ್ಟಪದದಿ ಧ್ವಜಚಿಹ್ನಾಕಾರ ದಿಟ್ಟಿ ನಖಾಗ್ರದಿ ತಟಿತ ಪ್ರಭಾಕರ ಪಟುತರ ಕರಪಾದ ಚಟುಲರೂಪ ಮನ- ತಟದಿ ಇಟ್ಟು ಲವತೃಟಿಯು ಬಿಡದೆ ಸುರ- ನಿತ್ಯ ಕರಪುಟದಿ ನಮಿಸಿ ಉತ್ಕಟದಿ ಗುಣಗಳ ಪಠಣದಿಂದಿರೆ ಮುದದಿ ಪಟುತರ ಭಕುತಿಯ ಭರದೀ ನಟಿಸುತ ತನು ಮರೆದಾತುರದಿ ಉ- ತ್ಕಟದಲಿ ನುತಿಸುತ ಭರದೀ ನಟಿಸುವಾ ಸ್ಮರಿಸುವಾ ಭಕುತಜನರ ಕಂಟಕವಾ ಆ ಧಿಟರು ನೀತ ಭಟರಂದು ನಿಜ ಜಠರಾಲಯದಿ ಇಂ- ಬಿಟ್ಟು ಭಕುತರ ಕಟಕಪೊರೆದು ಭವಾಬ್ಧಿಯ ಕಂಟಕ ಜಗಶಿಕ್ಷಾ 4 ಸ್ವಗತಭೇದವಿವರ್ಜಿತಶೂನ್ಯ ನಿಗಮಾತೀತ ದೇವವರೇಣ್ಯ ಬಗೆಬಗೆ ಸ್ವರ ಶಬ್ದವಾಚ್ಯವರೇಣ್ಯ ಅಗಣಿತಗುಣಗಣಪೂರ್ಣ ಸಂಪೂರ್ಣ ಯೋಗಿಗಳ್ ಪೊಗಳುವ ಸವಿತೃವರೇಣ್ಯ ಬಗೆಗಾಣರೊ ಸಾಕಲ್ಯದಿ ನಿನ್ನ ತ್ರಿಗುಣ ವಿರಹಿತನಾಗಿಹನ್ನ ನಗಜಾಧವ ಪಿಕನುತಪಾವನ್ನ ದುರ್ಗಾ ಶ್ರೀ ಭೂದೇವಿಯರಮಣ ಯುಗ ಯುಗದೊಳು ಜಗಕಾರ್ಯದಿ ಧರ್ಮ ಪ್ರಘಟ- ನೆಗೋಸುಗ ಸ್ವಗತರೂಪ ತಾ ನೆರಹಿ ಕ್ರೂರ ಪಾ- ಪೌಘರ ಮಡುಹಿ ಜಗದೇಕ ವೀರ ಮಿಗೆ ಜನಿಸಿದೆ ಜಗದೀಶಾ ಸುಗುಣ ಸಾಕಾರ ಸರ್ವೋತ್ತಮ ಶ್ರೀಶಾ ಜಗಜ್ಜಾಲ ಲೀಲಾವಿಲಾಸ ಜಗವೆಲ್ಲಾ ಈಶಾವಾಸ್ಯ ಸೃಜಿಸಿ ನೆಲೆಸೀ ಸ್ವಪ್ರಯೋಜನ ರಹಿತನೆನಿಸೀ ಖಗವರೂಥÀ ಶ್ರೀ ವೇಂಕಟೇಶ ಪನ್ನಗಗಿರಿಯೊಳು ನೆಲೆಸಿ ಜೀವರ ಯೋಗ್ಯಸಾಧನೆ ಇತ್ತು ಮನೋಭೀ-ಷ್ಟವನ್ನೆ ಸಲಿಸಿ ಉರಗಾದ್ರಿವಾಸವಿಠಲನೆನಿಸೀ 5
--------------
ಉರಗಾದ್ರಿವಾಸವಿಠಲದಾಸರು
ಪವಮಾನ-ಪಾವನಮೂರ್ತಿಯು ನೀನು ಕಾವುದೆಮ್ಮನು ಪ ಭುವನ ಚತುರ್ದಶದಲ್ಲಿಹ ಜೀವರ ಜೀವನ ನಿನ್ನದೋ ದೇವವರೇಣ್ಯಅ.ಪ ತೃಣಜೀವರಾದಿ ಸರ್ವರೊಳು ನಿಂತು ಗುಣಕಾಲಕರ್ಮಕ್ಕನುಗುಣನಾಗಿಹ ಫಲವ ನೀನಿತ್ತು ಕ್ಷಣ ಬಿಡದೆಲೆ ನೀನಗಣಿತ ಕಾರ್ಯವ ದಣಿಯದೆ ಮಾಡಿಸಿ ಧಣಿಗರ್ಪಿಸುವಿಯೊ1 ಶ್ರೀ ಜಗದ್ಗುರುವರೇಣ್ಯನೆ ನೀನು ಋಜುಸಾರ್ವಭೌಮ ನಿಜ ಪಾದಾಂಬುಜವ ತೋರಿಸೊ ಇನ್ನು ಈ ಜಗ ಕಾರ್ಯ ನಿವ್ರ್ಯಾಜದಿ ಮಾಡುತ ನೀ ಜಯಾಪತಿಗರ್ಪಿಸಿ ಅಜಪದ ಪಡೆದೆಯೊ2 ಕೋಟಿತ್ರಯರೂಪನೆ ಕಾಯುವುದಯ್ಯ ದಾಟಿಸು ಭವಶರಧಿಯಾ ಪಾಟುಪಟ್ಟದ್ದೆಲ್ಲ ನೀನರಿಯಾ ಸಾಟಿಯುಂಟೆ ಲಲಾಟನೇತ್ರ ಬೆ ನ್ನಟ್ಟಿ ಬರಲು ಕೇದಾರಕೆ ಅಟ್ಟಿದೆ 3 ಮರಣ ಜನುಮಂಗಳು ಬಂದರೆ ಬರಲಿ ಹರಿಗುರುಗಳಲಿ ಸ್ಮರಣೆಯು ತಪ್ಪದೆ ನಿಶ್ಚಲವಿರಲಿ ಉರುತರ ಹರಿಸರ್ವೋತ್ತಮವೆಂಬುವ ತರತಮ ಭೇದವು ನಿರುತವು ಇರಲಿ 4 ಶ್ರವಣ ಮನನಾದಿ ಭಕುತಿಯನ್ನು ಪವಮಾನ ನೀ ಕೊಡು ಅನುಮಾನಿಸಬೇಡವೋ ನೀ ಇದಕ್ಕಿನ್ನು ಭವಮೋಚಕ ಶ್ರೀ ವೇಂಕಟೇಶ ಇನ್ನೊಳಹೊರಗಿಹನೆಂಬುವುದನು ತೋರೋ 5
--------------
ಉರಗಾದ್ರಿವಾಸವಿಠಲದಾಸರು
ಪ್ರಸನ್ನ ಶ್ರೀ ಬುದ್ಧ ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ ಅನುಪಮಾದ್ಭುತ ಶಿಶುರೂಪ ನಿರವಧಿಕ ಅಮಿತ ಕಲ್ಯಾಣಗುಣಧಾಮ ಬುದ್ಧ ಶರಣು ಮಾಂಪಾಹಿ ಪ ಮಾಧವ ಗೋವಿಂದ ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ ಈಶ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ1 ವಾಸುದೇವ ಪ್ರದ್ಯುಮ್ನ ನಮೋ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2 ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3 ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು ಸರ್ವ ಈ ಹದಿನಾಲ್ಕು ಭುವನಂಗಳು ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು ಸರ್ವದಾ ಅಚಿತ್ ವಸ್ತುಗಳಿಗೆ 4 ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5 ಜೀವನ ಸ್ವರೂಪಾನುಸಾರದಿ ಮೂರು ವಿಧವು ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6 ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ ಯಾವನೂ ಸ್ವೀಕರಿಸ ಎತ್ತಿ ಎಸೆವ 7 ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ - ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು ಶ್ರೀಪ ನಿನ್ನ ಪಾಲಸಾಗರತಟ ಬಂದು ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8 ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ ಸನ್ನುತ ಇವಗೆ ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9 ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ ಸುರರು ನಿನ್ನಲ್ಲಿ ಪೇಳಿದರು 10 ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ ಬೆಳೆಯುವುದು ಮೋಹವು ದ್ವೇಷ ಪರಿಪಾಕ ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11 ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ ಧಾತ್ರಿಯಲಿ ಸೌದ್ಧೋದನ ಜಿನನೆಂದು ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12 ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ ದೇವವರೇಣ್ಯ ನೀ ಅಭಯವನಿತ್ತಿ ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13 ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು ಪೋಗಿ ನೀ ಆ ಮಗುವ ಮರೆಯಾಗಿಸಲು ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14 ಇದನ್ನರಿಯದೇ ಜಿನಾದಿಗಳು ನಿನ್ನನ್ನೇ ಜಾತವಾದ ತಮ್ಮ ಮಗುವೆಂದು ನೆನೆದು ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ ಮುದದಿ ಕೊಂಡಾಡಿದರು ಪುತ್ರೋತ್ಸವವ 15 ಕದಳೀ ತೆಂಗು ಪೂಗಿ ಮಾವು ತೋರಣವು ವಾದ್ಯಂಗಳ ಅರ್ಭಟ ವೇದ ಘೋಷಗಳು ದೈತ್ಯ ವಿದ್ವಾಂಸರ ವಾದ ಮೀಮಾಂಸವು ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16 ಆಶ್ಚರ್ಯ ಏನಿದು ಹಸಿಮಗು ನಗುತಿದೆ ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ ಬುದ್ಧ ನಿನ್ನ ಹೆಸರೆಂದು ಮೆಚ್ಚಲಾರೆನು ವೈದಿಕಕರ್ಮ ಎಂದಿ 17 ವೇದ ಅಪ್ರಾಮಣ್ಯ ಬೋಧಕವೆಂದು ತೋರುವ ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು ಬೋಧಿಸಿದ ಮೋಹಕ ಮಾತು ಜಿನಾದಿಗಳು ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18 ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ ಬಂದರು ಆ ಜಿನಾದಿಗಳಿಗೆ ಕಾಣಿಸುತ ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19 ವೇದ ವಿರುದ್ಧ ಮಾತುಗಳಾಡುತ ನೀನು ವೇದ ಅಪ್ರಾಮಣ್ಯ ವಾದಿಸುತ್ತಿ ಸದೆದು ಹಾಕುವೆವು ಎಂದು ಕೂಗುತ್ತ ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20 ಮೋದಮಯ ಶಿಶುರೂಪ ಅಚ್ಯುತನೇ ನೀನು ಆ ದೇವತೆಗಳು ಪ್ರಯೋಗಿಸಿದ ಆಯುಧ ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ ಮಧುಸೂಧನ ವಿಷ್ಣು ಬರಲೀ ಅವ ಎಂದಿ 21 ಲೀಲಾ ವಿನೋದದಿ ಮತ್ತೊಂದು ರೂಪದಿ ನೀ ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22 ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ ಸುರರು ತಮ್ಮ ತಮ್ಮ ಸ್ಥಳಕೆ 23 ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ ಎಲ್ಲ ದೇವತೆಗಳು ಸೋತು ಓಡಿ ಹೋದರು ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24 ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು ಬುದ್ಧ ಆ ಜಿನಾದಿ ದೈತ್ಯರ ಸಮೂಹವು ತಬ್ಬಿಕೊಂಡರು ತಮಸ್ ಸಾಧನ ಮತಿಯ 25 ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26 ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27 ಅದೋಷನು ನೀನು ದೋಷ ಅಭಾವವಾನ್ ಸದಾ ನೀನು ಭಿನ್ನನು ಜಡ ಜೀವರಿಂದ ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ ಆದುದರಿಂ ಅ ಎಂದು ನೀನೇವೇ ಜÉ್ಞೀಯ 28 ಭವ್ಯವಾಗಿರುವುದು 'ಅ' ಯಿಂದ ಜಗತ್ತು ಭವ್ಯ ಎಂದರೆ ಉತ್ಪಾದ್ಯ ಎಂಬುವುದು ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ ಅಭಾವವೆಂದಿ ವಿಭುವೇ ಸತ್ಯಜ್ಞಾನ 29 ಕಾಲ ಅವಯವ ಕ್ಷಣಕ್ಕೆ ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್ ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30 ಶಂ ಎಂದರೆ ಸುಖವು ಉ ಉತ್ತಮತ್ವವು ಶಂ ಸಹ ಉ ಸೇರಿ ಶೂ ಆಯಿತು ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31 ಶೂನ್ಯ ಎಂಬುವರು ಜ್ಞಾನವಂತರು ಹೀಗೆ ವಿಗ್ರಹ ಮಾಡುವರು ಆನಂದಮಯನಾದ ಅನುತ್ತಮೋತ್ತಮ ನಿನ್ನ ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32 ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33 ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34 ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35 ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ ಇತಿಹಾಸ ಪುರಾಣಾದಿಗಳ ನಮಗಿತ್ತ ವೇದವ್ಯಾಸ ಸುಹೃತ್ ಬುದ್ಧನು ನೀನೇವೇ ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36 ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ ಬುದ್ಧಾವತಾರ ಮೋದಮಯ ಕರುಣಾಳು 37 -ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬಾ ವೆಂಕಟಶೈಲಾಧಿಪ ಮನ್ಮನಕೆ ತಡಮಾಡುವುದ್ಯಾಕೆ ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ ನಮಿಸುವೆ ಪ್ರತಿ ಕ್ಷಣಕೆ ಪ ನೀ ಒಲಿದೆನ್ನ ದಯಾವಲೋಕನದಿ ಪಾವನಮಾಡಲು ದೇವವರೇಣ್ಯ ಅ.ಪ. ವೈಕುಂಠಾಧೀಶ ವಿಗತಕ್ಲೇಶ ಚಿತ್ಸುಖಮಯವಪುಷ ಭವ ಮದನ ದಿ ವಾಕರ ಪ್ರಮುಖ ದಿವೌಕಸ ವರದ 1 ಮಮಸಮಾಸ್ವಾಮಿ ಮದಂತರ್ಯಾಮಿ ಸರ್ವಾಂತರ್ಯಾಮಿ ಅಮಿತಾತ್ಮ ಅತಿರೋಹಿತ ನಿಷ್ಕಾಮಿ ಸೇವಿತ ಶ್ರೀಭೂಮಿ ಅಮಿತ ಸುಗುಣಪೂರ್ಣ ಅಮಲಮಹಿಮ ಖಳದಮನ ದಯಾಳೊ 2 ನಾಮಾಭಿಧೇಯ ಲೋಕಾಧ್ಯಕ್ಷಾ ಕಮಲಾಯತಾಕ್ಷ ಸೋಮ ಭೂಮ ನಿಸ್ಸೀಮ ಮಹಿಮ ತ್ರಿ ಧಾಮರಾಮ ಘನಶ್ಯಾಮ ಲಲಾಮ 3 ಪವನಂತರಾತ್ಮಾ ನಿರ್ಮಲಾತ್ಮಾ ಪರಮಾತ್ಮ ಜ್ಞಾನಾತ್ಮಾ ಅವಿಕಾರ ಅತಿರೋಹಿತ ಭೂತಾತ್ಮ ಪೂತಾತ್ಮ ಮಹಿತಾತ್ಮ ತ್ರಿವಿಧ ಜೀವರಿಗೆ ವಿವಿಧ ಫಲಂಗಳ ತವಕದಿ ಕೊಟ್ಟವರವರ ಪಾಲಿಸೋ 4 ಸೃಷ್ಟ್ಯಾದಿಕರ್ತ ತ್ರಿಜಗದ್ಭರ್ತ ಲೋಕೈಕ ಸಮರ್ಥ ವೃಷ್ಣೀಶಾ ವೃಂದಾರಕ ರಿಪುಹರ್ತಾ ಮುಕ್ತರ ಪುರುಷಾರ್ಥ ಪರಮೇಷ್ಟಿ ಜನಕ ಶಿ ಷ್ಟೇಷ್ಟ ಹೃಷ್ಟ ಅನಿವಿಷ್ಟ ನಿವಿಷ್ಟ 5 ವೇದಸ್ತೇಯಾರಿ ಮಂದರಧಾರಿ ಭೂವರ ನರಹರಿ ಭೂ ದಾನವ ಬೇಡಿದ ಚಾಪಕುಠಾರಿ ರಾವಣಕುಲವೈರಿ ಯಾದವ ವಂಶ ಮಹೋದಧಿ ಚಂದಿರ ಸಾದಿತ ತ್ರಿಪುರ ಖಳೋದರ ಪಾಹಿ 6 ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯಸಾರಾ ಹಯಮುಖ ಲೋಕತ್ರಯ ಪತ್ರಯಾಮಯ ವಯನಗಯ್ಯ ನಾ ಬಯಸುವೆ ನಿನ್ನ7 ಭವ ಭಯಹಾರಿ ಬಿನ್ನೈಸುವೆ ಶೌರಿ ವಿಹಿತಾಹಿತಗಳು ನಿನ್ನನು ಮೀರಿ ಮಾಳ್ಪೆಗೆ ಕಂಸಾರೀ ಮಹಿತ ಶಮಲ ಸದಹಿತ ಲಕುಮಿ ಭೂ ಸಹಿತ ಮನದಿ ಸನ್ನಿಹಿತನಾಗೆಲೋ 8 ದಾತಾ ನೀನಲ್ಲದನ್ಯರರಿಯೇ ಕಂಡವರನು ಕರಿಯೇ ಪ್ರೀತನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ ಶ್ರೀ ತರುಣಿಯೊಡಗೊಡೀ ತನು ಸದನಕೆ ನೀ ತ್ವ ರಿತದಿ ಜಗನ್ನಾಥ ವಿಠ್ಠಲ 9
--------------
ಜಗನ್ನಾಥದಾಸರು
ಯೇನು ಕರುಣಾಳೋ ದೇವವರೇಣ್ಯ ಯೇನು ಭಕುತರಧೀನನೋ ಪ ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅ.ಪ. ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ ಒಡನೆ ತಿರುಗೂವ ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ 1 ಪಾವನವ ಮಾಡಿದನು ಬಲು ಕೃ ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ ಕವಿ ಮನ್ನಿಸಿ ತಪ್ಪನೆಣೆಸದೆ ದೇವ ಜಗತ್ರಯ ಜಿತ ಕರಣ ವಸುದೇವ ದೇವಕೀನಂದನಾ2 ದೋಷರಾಶಿಯೊಳಿದ್ದು ಅನುದಿನ ಮೋಸಗೊಳಿಸುವ ಭವವನಧಿ ಮಧ್ಯ ಈಶ ಕಡಕಾಣಲಾರದೆ ಕ್ಲೇಶದಲಿ ಸಂಚರಿಸುತ್ತಿಪ್ಪ ಮಾನೀಶ ಪಶುವನು ನೋಡಿ ವೇಗದಿ ಲೇಸು ಕೊಡುವೆನೆಂದು ಆನಂದ ದಾಸರೊಳಗಿದ್ದ ನರಹರೀ 3 ಡಂಬಕಾ ಭಕುತಿಯನೆ ಬಿಡಿಸೀ ವೆಂಬೋದೆ ನಿರ್ಮಲ ಮಾಡೀ ಪಾದ ಇಂಬು ಬಯಸುವ ಸುಖವೆ ಪಾಲಿಸಿ ಪೊಂಬುಡೆಧರ ಗೋವಿಂದಾ 4 ಜಪತಪಾನುಷ್ಠಾನ ನಾನಾ ವುಪವಾಸ ವ್ರತದಾನ ಧರ್ಮಗ ಳಪರಿಮಿತವಾದ ಯಾಗ ಕನ್ಯಾದಾನ ನಾನಾಲೋಚನ ಸ್ವಪನದಲಿ ಕಾಣಿಸುವ ತಾನೆ ಕೃಪಣರಿಗೆ ವಲಿದಲ್ಲದೆ ಬಿಡ ಚಪಲ ವಿಜಯವಿಠಲಾ5
--------------
ವಿಜಯದಾಸ
ಶ್ರೀ ವಾಯುದೇವರು ಕಾಯೊ ಹನುಮರಾಯ ನಿನ್ನ ಕಾಯ ಮನದಿ ನಮೋ ಪ ಭಾರತೀಶ ಕೃಪಾಸಮುದ್ರನೆ ವಾರಿಜಜಾಂಡದಿ ಸರ್ವಜೀವರೊಳಿದ್ದು ಮೂರೇಳು ಸಾಸಿರ ನೂರಾರು ಜಪಗಳ ಇರುಳು ಹಗಲು ನರಹರಿಗೆ ಅರ್ಪಿಪ ಸುರ 1 ಮಾತರಿಶ್ವಪ್ರಖ್ಯಾತ ಮಹಿಮನೆ ವಾತ ಪ್ರಭಂಜನ ಸತತ ಎನ್ನನು ಅತಿ ಹಿತದಿ ನೀ ಸಲಹುವೆ ಪ್ರತತ ಶ್ರೀ ನೃಹರಿಯ ಪ್ರಥಮಾಂಗನೆ ದಣಿ 2 ಸತ್ಪಾತ್ರ ಮಾಡೆನ್ನ ಸೂತ್ರಸುಖ ಸಿತಗಾತ್ರ ಪವಿತ್ರನೆ ಮಾತ್ರಾಕರಣನಿಯಂತೃ ಮಹಂತನೆ ಚಿತ್ರ ಪುರುಷ ಮಾಕಳತ್ರನ ತೋರಿಸೊ 3 ದೇವಜನನುತ ಭಾವಿ ಬ್ರಹ್ಮನೆ ಕಾವ ಕರುಣಿಯೆ ಪವಮಾನ ನಮೋ ನಮೋ ಭಾವುಕರೊಡೆಯ ಶ್ರೀದೇವಿ ಶಾಂತಿಯ ಪತಿ ದೇವವರೇಣ್ಯನನಿರುದ್ಧನ ತೋರಿಸೊ 4 ಶುದ್ಧ P್ಪರುಣಾಬ್ಧಿ ನಮೋ ನಮೋ ಶುದ್ಧ ಭಕ್ತ್ಯಾದಿ ಸಂಪತ್ತು ಎನಗಿತ್ತು ಉದ್ಧರಿಸೊ ಎನ್ನ ಶ್ರದ್ಧೇಶ ಮುಖ್ಯಪ್ರಾಣ ಪದ್ಮೆ ಕೃತೀಶ ಪ್ರದ್ಯುಮ್ನಗೆ ಪ್ರಿಯತಮ 5 ಜ್ಞಾನಬಲರೂಪ ಹನುಮ ನಮೋ ನಮೋ ಜ್ಞಾನಸುಖಮಯ ಜಾನಕೀಶನ ದೂತ ಇನನ ಸುತನಿಗೆ ವಿಭೀಷಣನಿಗೆ ರಾಮ ತಾನೂ ಒಲಿದ ನೀನೊಲಿದ ಕಾರಣದಿ 6 ಕಾಂತ ಕೃಷ್ಣನೇಕಾಂತ ಭಕ್ತಾಗ್ರಣಿ ಅಂತಕ ಸುಜನರ ಸಂತತ ಪೊರೆವ ಧನಂಜಯಗೊಲಿದನೆ 7 ಪಂಚಭೇದ ಪ್ರಪಂಚ ಸತ್ಯವಿ ರಿಂಚಿಪಿತನೆ ಸ್ವತಂತ್ರ ಸರ್ವೋತ್ತಮ ಚಿಂತಿಸೆ ಭಕ್ತಿಯಿಂ ಮಿಂಚುಪೊಲ್ ತೋರಿ ನಿ ರಂತರ ನಿಜಸುಖವೀವನೆಂದೆಯೊ ಮಧ್ವ 8 ಶ್ರೀಶ ಚಿನ್ಮಯ ದೋಷದೂರನು ವ್ಯಾಸ ಸುಖಮಯ ಪ್ರಸನ್ನ ಶ್ರೀನಿವಾಸ ಭಾಸಿಪ ನಿನ್ನಯ ಹೃತ್ಸರಸಿಜದಲಿ ದಾಶರಥಿಯ ಮುಖ್ಯ ದಾಸವರ್ಯನೆ ನಮೋ 9
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವ್ಯಾಘ್ರಗಿರಿವಾಸ ಶ್ರೀ ಶ್ರೀನಿವಾಸ ಸೇವ್ಯ ಪಾದಾಜ್ಜ ಪ ಕಮಲಸಂಭವಜನಕ ಕಮಲಾಪ್ತ ಕುಲತಿಲಕ ಕಮಲ ಸನ್ನಿಭಚರಣ ಕಲುಷಗಣಹರಣ ಕಮನೀಯ ಗುಣಹಾರ ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತ ಶೃಂಗಾರ 1 ಲೋಕಮೋಹನರೂಪ ಲೋಕರಕ್ಷಣ ಚಾಪ ಸುಕೃತಿ ಪರಿವಾರ ನಾಕನಿಲಯ ಸಮಾಜ ನಮಿತ ಪಾದಾಂ ಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ ಗಾನರಸಲೋಲ 3 ತವಚರಣ ಪಂಕಜಂ ತೃಪ್ತಜನ ಸುರಕುಜಂ ಭವಜಲಧಿಕಾರಣಂ ಭವತು ಮಮ ಶರಣಂ ತವನಾಮಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ ಶಮಿತಾಘಮಹಿಮಾ 4 ಸಕಲಲೋಕ ಶರಣ್ಯ ಸರ್ವದೇವವರೇಣ್ಯ ನಿಖಿಲಭೂತವಾದ ನಿರ್ಮಲ ಸುವೇಷ ಅಕಲಂಕ ಚರಿತ ನಿತ್ಯಾನಂದ ಗುಣಭರಿತ ಶಿಖಿರಿಷ ವಿಹರಣ ಕುಶಲ ಶ್ರೀವರದ ವಿಠಲ 5
--------------
ವೆಂಕಟವರದಾರ್ಯರು
ಶ್ರೀ ಹರಿವ್ಯಾಪಾರ ಅಪಾರ ಪ ಶ್ರೀ ಸರಸಿಜಭವ ಸುರವರ ಪ್ರಮುಖರ ಭಾವನೆಗೊ ಅತಿ ದೂರ ಅ.ಪ. ಪೊಂದಿದೆ ಭಕುತರಿಗೆ ಕದಾಚಿತು ಬಂದೊಡಹಂ ಮಮತೆ ಕುಂದಿಸಿ ಗರ್ವವ ಬಂದತಿ ಲೀಲೆಯೊಳ್ ಚಂದದಿ ಪೊರೆವ ಗಜೇಂದ್ರವರದನು 1 ಕಷ್ಟದಿ ತೊಳಲಿಸುವ ನಿಜಭಕ್ತರ ಶ್ರೇಷ್ಠಗತಿಯ ಕೊಡುವ ದುಷ್ಟರಿಗೆ ಸಿರಿಕೊಟ್ಟು ಕೆಡಿಸುವನು ಶಿಷ್ಠ ಪಾಂಡವಪ್ರಿಯನ ಗುಟ್ಟಿದು ಕಾಣಿರೊ 2 ದೇವದಾನವರ ಸ್ವಭಾವವ ಕಲುಷ ವಿದೂರನುದೇವವರೇಣ್ಯ ಶ್ರೀ ಕರಿಗಿರೀಶನು 3
--------------
ವರಾವಾಣಿರಾಮರಾಯದಾಸರು
ಸಲಹೋ ಸಲಹೋ ಕರುಣಾಂಬುಧಿಯೇ ಕೋಲಜಾತಾ ತೀರ ನಿವಾಸಾ ಪ ವೃಂದಾವನದಿ ನಿಂದ ಮುನೀಂದ್ರ ಮಂದಜನನೌ‌ಘಕೆ ಕಲ್ಪ ಸಂಭೂಷಣ 1 ದೇವಸ್ವಭಾವ ಭೂದೇವವರೇಣ್ಯ ಕಾಯ 2 ಶ್ರೀಮಹಿವಲ್ಲಭ ಶಾಮ ಸುಂದರ ಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ 3
--------------
ಶಾಮಸುಂದರ ವಿಠಲ
ಎಂಥ ಬಲವಂತನೊ-ಕುಂತಿಯ ಸಂಜಾತನೋ |ಭಾರತಿಗೆ ಕಾಂತನೊ-ನಿತ್ಯ ಶ್ರೀಮಂತನೋ ಪರಾಮಚಂದ್ರನ ಪ್ರಾಣನೊ-ಅಸುರ ಹೃದಯ ಬಾಣನೊ |ಖಳರ ಗಂಟಲ ಗಾಣನೊ-ಜಗದೊಳಗೆ ಪ್ರವೀಣನೊ 1ಬಂಡಿಯನ್ನವನುಂಡನೊ-ಬಕನ ಪ್ರಾಣವ ಕೊಂಡನೊ |ಭೀಮಪ್ರಚಂಡನೊ-ದ್ರೌಪದಿಗೆ ಗಂಡನೊ 2ಕುಂತಿಯ ಕಂದನೊ ಸೌಗಂಧಿಕವ ತಂದನೋ |ಕುರುಕ್ಷೇತ್ರಕೆ ಬಂದನೊ-ಕೌರವರ ಕೊಂದನೋ 3ವೈಷ್ಣವಾಗ್ರಗಣ್ಯನೋ-ಸಂಚಿತಾಗ್ರಪುಣ್ಯನೋ |ದೇವವರೇಣ್ಯನೊ-ದೇವ ಶರಣ್ಯನೋ 4ಮಧ್ವಶಾಸ್ತ್ರವ ರಚಿಸಿದನೊ-ಸದ್ವೈಷ್ಣವರ ಸಲಹಿದನೊ |ಉಡುಪಿಕೃಷ್ಣನ ನಿಲಿಸಿದನೊ-ಪುರಂದರವಿಠಲನ ಒಲಿಸಿದನೊ 5
--------------
ಪುರಂದರದಾಸರು