ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ಬೆಳಗಾಗಲು ಅರಘಳಿಗೆಯು ಇರುತಿರೆ ಸ್ಮರಿಸುವೆ ವಿಶ್ವಮೂರುತಿಯನ್ನು ಬೆಳಗಾಗಲು ಹರಿಧ್ಯಾನವ ಮಾಡುತ ಬಹಿರ ಭೂಮಿಗ್ಹೋಗುತ ಮುನ್ನು 1 ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ- ಸರ್ಜನೆ ಮಾಡುತ ಮತ್ತಿನ್ನೂ ದಂತ ಧಾವನೆಯ ಮಾಡುತ ಶ್ರೀ ಮಾ- ಧವನನು ಸ್ಮರಿಸುವೆ ನಾನಿನ್ನೂ 2 ಮುಖವನು ತೊಳೆಯುತ ಮುರಹರಿ ಧ್ಯಾನದಿ ಶ್ರೀತುಳಸಿಯ ನಮಿಸುತಲಿನ್ನೂ ಮೀಸಲ ನೀರನು ಎರೆಯುತ ಬೇಗದಿ ಮೃತ್ತಿಕಿ ಫಣಿಗಿಡುತಲಿ ಇನ್ನು 3 ಮೂರು ಪ್ರದಕ್ಷಿಣಿ ಮಾಡುತ ಬೇಗದಿ ಮುದದಿ ನಮಸ್ಕರಿಸುತಲಿನ್ನೂ ದೇವರ ಮನೆಕಡೆ ಪೋಗುತ ನಿಂದಿಹ ಜಯವಿಜಯರಿಗೊಂದಿಸಿ ಮುನ್ನು 4 ದೇವರ ದರ್ಶನಕಾಜ್ಞೆಯ ಕೇಳುತ ದೇವರ ಗೃಹದೊಳು ಪೋಗುತಲಿ ಮಾಯಾ ಪತಿಯನು ಮನದೊಳು ಧ್ಯಾನಿಸಿ ವಂದನೆ ಮಾಡುತ ಬೇಗದಲಿ 5 ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ ಪದುಮನ್ಹಾಕುತಲಿ ಗಜವರದನ ಕೊಂಡಾಡುತ ಮುದದಿ ಗಜೇಂದ್ರ ಮೋಕ್ಷನ ಸ್ಮರಿಸುತಲಿ 6 ಗೋವೃಂದದ ಕಡೆ ಪೋಗುತ ಶ್ರೀ- ಗೋವಿಂದನ ಸ್ಮರಿಸುತ ನಿತ್ಯದಲಿ ಗೋಪೀ ಬಾಲನ ಗೋಕುಲವಾಸನ ಗೋವ್ಗಳ ಮಧ್ಯದಿ ಸ್ಮರಿಸುತಲಿ 7 ಬಾಲಕೃಷ್ಣನ ಲೀಲೆಯ ಪೊಗಳುತ ಬಾಲಲೀಲೆಗಳ ಕೇಳುತಲಿ ಪುರಾಣವ ಪೇಳುವ ದ್ವಿಜರಿಗೆ ವೃದ್ಧರಿಗೆರಗುತ ಪ್ರತಿನಿತ್ಯದಲಿ 8 ಮುರಳಿಯನೂದುತ ಮೆರೆಯುವ ಕೃಷ್ಣನ ಅನುದಿನ ಮಾಡುತಲಿ ಸರಸಿಜನಾಭನ ಸ್ಮರಿಸುತ ಮನದಲಿ ಸ್ನಾನಕೆ ತೆರಳುತ ಶೀಘ್ರದಲಿ 9 ನದಿಯ ಸ್ನಾನಕೆ ಪೋಗುವ ಸಮಯದಿ ನಾರದವಂದ್ಯನ ಸ್ಮರಿಸುತಲಿ ಭಾಗೀರಥಿಯಲಿ ಸ್ನಾನವು ಮಾಡುತ ಬಾಗುತ ಸಿರವನು ಬೇಗದಲಿ10 ಫಣಿರಾಜನ ಶಯನದಿ ಮಲಗಿಹ ಶ್ರೀ- ಪರಮಾತ್ಮನ ನೋಡುತ ಬೇಗ ಪಾದಗಳ ಸೇವಿಪ ಶ್ರೀ ಭೂದೇವಿಯ- ರೇನುಧನ್ಯರೆಂದೆನುತಾಗ11 ಪೊಕ್ಕಳ ಮಧ್ಯದಿ ಪೊರಟಿಹ ನಾಳದ ತುದಿಯಲಿ ರಂಜಿಪ ಕಮಲದಲಿ ಉದ್ಭವಿಸಿದ ನಾಲ್ಮೊಗನನು ನೋಡುತ ಬಗೆ ಬಗೆ ಪ್ರಾರ್ಥಿಸುತಲಿ ಇನ್ನು 12 ನೆರೆದಿಹ ಸುರ ಪರಿವಾರವೆಲ್ಲ ಶ್ರೀ- ಹರಿಯನು ವಾಲೈಸುತಲಿನ್ನೂ ಪರಮವೈಭವದಿ ಮೆರೆಯುವ ದೇವನ ಸ್ಮರಿಸುವೆ ಜಲಮಧ್ಯದೊಳಿನ್ನು 13 ದೇವರ ರಥವನು ತೊಳೆಯುವೆನೆಂಬ- ನುಸಂಧಾನದಿ ಸ್ನಾನವು ಮಾಡಿ ದೇವರ ರಥ ಶೃಂಗರಿಸುವೆನೆನ್ನುತ ಶ್ರೀಮುದ್ರೆಗಳ್ಹಚ್ಚುತ ಪಾಡಿ 14 ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ- ಹರಿಪೂಜೆಗೆ ಅಣಿಮಾಡುತಲಿ ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ ತಂದಿಡುವೆನು ಮೋದದಲಿ 15 ಪಂಚಭಕ್ಷ ಪಾಯಸಗಳ ಮಾಡುತ ಪಂಚಾತ್ಮಕ ನ ಸ್ಮರಿಸುತಲಿ ಮಿಂಚಿನಂತೆ ಹೊಳೆಯುವ ತಬಕಿಲಿ ತಾಂಬೂಲವ ನಿರಿಸುತ ಬೇಗದಲಿ 16 ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ ಬ್ರಹ್ಮನ ಪಿತಗರ್ಪಿಸುತಲಿರಲು ಸುಮ್ಮಾನದಿ ಮಹಲಕುಮಿಯು ಇದ- ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು17 ಪರಮಾತ್ಮನು ಈ ವಿಧ ಸೇವೆಯ ಕೈ- ಗೊಳುತಲಿ ಸಂತಸ ಪಡಲಿನ್ನು ಅರಿತವರೆಲ್ಲರು ನಿರುತದಿ ಹರಿ ಧ್ಯಾ- ನವ ಮಾಡುತಲಿರೆ ತಾವಿನ್ನು 18 ದೇವಪೂಜೆ ವೈಶ್ವದೇವವು ನಿತ್ಯದಿ ಗೋಬ್ರಾಹ್ಮಣನರ್ಚಿಸಿ ಇನ್ನು ಸಾಯಂ ಸಮಯದಿ ಸಾಧುಗಳೊಡನೆ ದೇವರ ಕಥೆ ಕೇಳುತಲಿನ್ನೂ 19 ಝಾಮಝಾಮದಿ ಜಯಶಬ್ದಗಳಿಂ ಜಯಾಪತಿಯನು ಪೊಗಳುತಲಿ ಆರತಿ ಜೋಗುಳ ಹಾಡುತ ಮುದದಲಿ ಮಧ್ವೇಶಾರ್ಪಣ ಪೇಳುತಲಿ 20 ಮಲುಗುವಾಗ ಮುಕುಂದನ ಸ್ಮರಿಸುತ ಲಯ ಚಿಂತನೆಯನು ಮಾಡುತಲಿ ಕರಮುಗಿಯುತ ಕಾಯೇನ ವಾಚಾ ಎಂ- ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ 21 ಝಾಮಝಾಮದಿ ಶ್ರೀ ಹರಿ ಮಾಧವ ಆಗಲು ಬೆಳಗಿನ ಝಾವದಿ ಸೃಷ್ಟಿಯ ಚಿಂತನೆ ಮಾಡಿ ಎಂದೆನುತ22 ಮಳಲಗೌರಿ ನೋಂತಿಹ ಸತಿಯರಿಗೆ ಮುರಳೀಧರ ಒಲಿದಿಹನೆನ್ನುತ ಉದಯವಾಗಲು ವಿಶ್ವನ ಸ್ಮರಿಸುತ ವಿಧಿ ನೇಮಗಳನುಸರಿಸುತ್ತ 23 ನಿತ್ಯದಿ ಈ ತೆರವಾಚರಿಸುವ ನರ ಮುಕ್ತನು ಧರೆಯೊಳಗೆಂದೆನುತ ಅತ್ಯುತ್ಸಾಹದಿ ಬರೆದೋದುತಲಿ- ದರರ್ಥವ ತಿಳಿದಾಚರಿಸುತ್ತ24 ಈ ವಿಧ ಚಿಂತನೆ ಮಾಡುವ ಮನುಜಗೆ ದಾರಿದ್ರ್ಯವು ದೂರಾಗುವದು ಮಾರಮಣನು ತನ್ನವರೊಡಗೂಡುತ ವಾಸವಾಗುವನೆಂಬುವ ಬಿರುದು25 ಕರೆಕರೆಗೊಳ್ಳದೆ ಕೇಳಿರಿ ನಿತ್ಯವು ಕನಕಗಿರಿವಾಸನ ಮಹಿಮೆ ಕನಲಿಕೆ ಕಳೆವುದು ಕಮಲನಾಭ- ವಿಠ್ಠಲನು ಕೊಂಡಾಡುತ ಮಹಿಮೆ 26
--------------
ನಿಡಗುರುಕಿ ಜೀವೂಬಾಯಿ
ಮನಮುಟ್ಟಿ ಮಾಡುವದೆ ಭಕ್ತಿಗಳು ಶ್ರುತದೃಷ್ಟನು ಮನದಿಂದ ಮಾಡುವ ನೇಮನಿತ್ಯಗಳು ಮಹಾ ಧರ್ಮಶಾಸ್ತ್ರಗಳು ಯತಿ ಕುಲದೀಪಗಳು 1 ತ್ರಿವೇಣಿ ಸಂಗಮ ಸ್ನಾನಗಳು ಮಹಾದಿವ್ಯ ಮಡಿಯಗಳು ಇಟ್ಟಿಹ ದ್ವಾದಶ ನಾಮಗಳು ಮನಗಂಡಿಹದೇ ಶ್ರೀಮುದ್ರೆಗಳು 2 ಸ್ಮರಣೆಯೊಳಿಹುದೆ ಸಂಧ್ಯಾನಗಳು ಜಪಸರ ಮಾಲೆಗಳು ಜಪತಪ ಧ್ಯಾನವೆ ಮೌನಗಳು ನಿರ್ಧಾರದಿ ಗುರುಪಾದ ನಿಶ್ಚೈಸಿಹ ವ್ರತ ಆಚಾರವೇ ನಿಷ್ಠೆಗಳು 3 ಮಾಡುವುದೇ ದೇವಪೂಜೆಗಳು ಅಂತ:ಕರಣದಿ ಗುರುಚರಣದ ಅಭಿಷೇಕಜ್ಞಾನ ಭಾಗೀರಥಿ ತೀರ್ಥಗಳು ಚಿತ್ತಚಿಂತನದಿ ದಿವ್ಯ ವಸ್ತ್ರಗಳು ಪರಿಮಳಪುಷ್ಪಗಳು 4 ಅನಿಮಿಷ ನೇತ್ರದಿ ನೋಡುವ ಘನ ಚಿತ್ಪ್ರಕಾಶವೆ ಸದಾನಂದದ ಮೊದಲಾದ ಸತ್ವರಜತಮ ಏಕಾರ್ತಿಗಳು ಸದ್ಭಾವನಿ ತಾಂಬೂಲಗಳಿಂದಲಿ ರತಿಮನ ಘನ ಮಂಗಳಾರ್ಚನಿ ಪಂಚ ಪ್ರಕಾಶಗಳು 5 ಶ್ರೀಗುರು ಸೇವೆ ಸತ್ಕಾರಗಳು ಜಯ ಲಕ್ಷ್ಮಿಯ ಷೋಡಶ ಉಪಚಾರಗಳಿಂದಲಿ ಮಹಾದಿವ್ಯ ಪೂಜೆಗಳು ತಲ್ಲೀನವು ಅಗಿಹ ಗುರುಪಾದದಿ ಪ್ರದಕ್ಷಿಣೆವೆ ಗುರುನಾಮವೇ ಸದ್ಗತಿ ಮುಕ್ತಿಗಳು 6 ಆತ್ಮಾನುಭವ ಗುರುದಾಸರಿಗಲ್ಲದೆ ಬಲ್ಲವೇನು ಪಶುಪ್ರಾಣಿಗಳು ಸಾಕ್ಷಾತ್ಕಾರಗಳು ಭಾಸ್ಕರ ಸ್ವಾಮಿಗಳು ತ್ರಾಹಿ ಜೀವನಮುಕ್ತಿಗಳು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭುವನವನಾ ಯಂಧ್ಯಾಗಿದ್ದರೆಕರ|ಸುವದು ನಿರಂತರ ಲೋಕದಲೀ ||ಅವಿದಿತ ನಾನು ಅದನ್ನ ಆಪನಿತು |ವಿವರಿಸುವೆನು ಕಲಿಗಳು ಕೇಳೀ ಪರವಿಮೂಡವ ಮುಂಚೇಳುತ ಶ್ರೀಮಾ |ಧವನ ಸ್ಮರಿಸುತಿರಲದೆ ಭವನಾ ||ಯುವತಿಯರಾ ವ್ಯಾಳ್ಯದಲಿ ಮೊಸರು ಮಥ |ನವ ಮಾಡುತಿಹರು ಅದೆ ಭವನಾ 1ಶಂಖ ಚಕ್ರ ಮೊದಲಾಯುಧ ಧರಿಸದೆ |ಮಂಕುಗಳಿರುತಿಹರದೇ ವನಾ ||ಸಂಕಟ ಚೌತೀ ಶಿವನಿಸಿ ಭೂತ ಶ |ಶಾಂಕನ ಪೂಜಿಪರದೇ ವನಾ 2ಅಂಗನಿಯರು ತಿಲಕಾಯುಧ ಕುಂಕುಮ |ಶ್ರಿಂಗರವಾಗಿ ಹರದೆ ಭವನಾ ||ಅಂಗಣದಲಿ ವೃಂದಾವನ ಗೋವ್ಗಳು |ರಂಗವಲಿಕ್ಕುವರದೆ ಭವನಾ 3ಸರುವರು ಸರ್ವದ ದುಷ್ಟ ಶಬ್ದ ಉ |ಚ್ಚರಿಸುತಲಿಪ್ಪರು ಅದೇ ವನಾ ||ಹರಿಗತಿ ಪ್ರಿಯಕರ ತುಲಸಿಲ್ಲದ ಮಂ |ದಿರವೆ ನಿಶ್ಚಯವಾಗಿ ವನಾ 4ರಾಮಾರ್ಪಿತದನ್ನವ ಹೋಮಿಸಿದ |ಧೂಮ ವ್ಯಾಪಿಸಿಹದದೆ ಭವನಾ ||ಭಾಮಿನಿಯರು ಕೆಲಸವ ಮಾಡುತಖಳ|ಭೀಮನ ಸ್ಮರಿಸುವರದೆ ಭವನಾ 5ದೇವಪೂಜೆ ನೈವೇದ್ಯವು ವೈಶ್ವ |ದೇವ ಯಂಬದಿಲ್ಲದೇ ವನಾ ||ಆವ ಕಾಲಕೂ ವೇದ ವೇದ್ಯ ಭೂ |ದೇವರು ಬರದಿಹದದೇ ವನಾ6ವೇದ ಪುರಾಣದ ಘೋಷವು ಸರ್ವದ |ಭೂ ದಿವಿಜರ ಸಂದಣೆ ಭವನಾ ||ವಾದಿಗಳ ಹಳಿದು ಮಧ್ವರಾಯರಾ |ರಾಧನೆ ಮಾಡುವರದೆ ಭವನಾ 7ಹಿಕ್ಕದೆ ತಲಿ ಕಚ್ಚಿಲ್ಲದೆ ತಿರುಗುತ |ಮಕ್ಕಳನಳಿಸುವರದೇ ವನಾ ||ಸೊಕ್ಕಿಲಿ ಗಂಡತ್ತಿಗಳಿಗೆ ಬೈತಿಹ |ರಕ್ಕಸಿ ಹೆಂಗಸಿಹದೇ ವನಾ 8ತಂಬೂರಿ ತಾಳಂಗಳ ಸುಸ್ವರ |ತುಂಬಹದೆಂದೆಂದು ಭವನಾ ||ಉಂಬುವಾಗಪ್ರತಿಪ್ರತಿ ತುತ್ತಿಗೆ | ಪೀತಾಂಬರನ ಸ್ಮರಿಪರದೆ ಭವನಾ 9ರೌಚ ದಂತ ಧಾವನ ಮೊದಲಾದ ಸ |ದಾಚಾರಿಲ್ಲಲ್ಲದೇ ವನಾ ||ಯಾಚಕರಿಗೆ ತುತ್ತನ್ನವಿಲ್ಲ ಮ |ತ್ತ್ಯೋಚನಿ ಯಾತಕೆ ಅದೇ ವನಾ 10ಹರಿದಿನದಲಿ ಸರ್ವರು ನಿರ್ಜಲ ಜಾ |ಗರವನು ಮಾಡುವರದೇ ಭವನಾ ||ಮರುದಿನ ಭೋಜನ ಸೂರ್ಯೋದಯ ಕಂ |ತರಿಸದೆ ಮಾಡುವರದೆ ಭವನಾ 11ಉದಯಾಗಿ ತಾಸಾದರನ್ನನರ|ಸುದತಿಯರೇಳದ ಮನೇ ವನಾ ||ಪದುಮನಾಭ ನಾಮೋಚ್ಚಾರಣೆ ಯಂ |ಬದು ಎಂದೆಂದಿಲ್ಲದೇ ವನಾ 12ಪ್ರತಿದಿನ ಧರ್ಮಕೆ ಪ್ರತಿಕೂಲಾಗದ |ಸತಿಸುತರಿದ್ದರೆ ಅದೆ ಭವನಾ ||ವೃತಗಳು ಸದ್ದಾನಗಳು ತಿಳಿದನವ |ಕತ ಮಾಡುತಿಹ್ಯರದೆ ಭವನಾ 13ರೊಕ್ಕವಿದ್ದು ಸದ್ವ್ಯಯವಾಗದ ಯಳಿ |ಮಕ್ಕಳಿಲ್ಲದಿಹ ಸದನೇ ವನಾ ||ಮುಕ್ಕುಂದನ ದಾಸರ ನಿಂದಿಸುತಿಹ್ಯ |ಚಿಕ್ಕ ಮತಿಗಳೀಹದೇ ವನಾ 14ಮಾರುತ ಮತವನುಸರಿಸುತಲೀ ವ್ಯವ |ಹಾರ ಮಾಡುವದೆ ಭವನಾ ||ಮಾರುತಿ ಸುತ ಪ್ರಾಣೇಶ ವಿಠ್ಠಲನ ಪ |ದಾರಾಧನೆ ಮಾಡುವರದೆ ಭವನಾ 15
--------------
ಪ್ರಾಣೇಶದಾಸರು
ಹರಿಯ ನೆನೆಯದ - ನರಜನ್ಮವೇಕೆ ? ಶ್ರೀಹರಿಯ ಕೊಂಡಾಡದ ನಾಲಿಗೆಯಿನ್ನೇಕೆ ಪ.ಸತ್ಯ - ಶೌಚವಿಲ್ಲದ ಆಚಾರವೇಕೆ ?ಚಿತ್ತ ಶುದ್ಧಿಯಿಲ್ಲದ ಜ್ಞಾನವೇಕೆ ?ಭಕ್ತಿ - ಭಾನವಿಲ್ಲದ ದೇವಪೂಜೆ ಏಕೆ ?ಉತ್ತಮರಿಲ್ಲದ ಸಭೆಯು ಇನ್ನೇಕೆ ? 1ಕ್ರೋಧವ ಬಿಡದಿಹ ಸಂನ್ಯಾಸವೇಕೆ ?ಆದರವಿಲ್ಲದ ಅಮೃತಾನ್ನವೇಕೆ ?||ವೇದ - ಶಾಸ್ತ್ರವಿಲ್ಲದ ವಿಪ್ರತನವೇಕೆಕಾದಲಂಜುವನಿಗೆ ಕ್ಷಾತ್ರ ತಾನೇಕೆ ? 2ಸಾಲದಟ್ಟುಳಿಯೆಂಬ ಸಂಸಾರವೇಕೆ ?ಬಾಲಕರಿಲ್ಲದ ಭಾಗ್ಯವಿನ್ನೇಕೆ ?ವೇಳೆಗೆ ಒದಗದ ನೆಂಟರಿನ್ನೇಕೆ ? ಅನುಕೂಲವಿಲ್ಲದ - ಸತಿಯ ಸಂಗವೇಕೆ 3ಮಾತೆ - ಪಿತರ ತೊರೆದ ಮಕ್ಕಳಿನ್ನೇಕೆ ?ಮಾತು ಕೇಳದ ಮಗನಗೊಡವೆ ಇನ್ನೇಕೆ ||ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅನಾಥನಾಗಿರುವಗೆ ಕೋಪವಿನ್ನೇಕೆ ? 4ಅಳಿದುಳಿದಿಹ ಮಕ್ಕಳುಗಳಿನ್ನೇಕೆ ?ತಿಳಿದು ಬುಧ್ಧಿಯ ಹೇಳಿದ ಗುರುತನವೇಕೆ ?ನಳಿನನಾಭ ಶ್ರೀ ಪುರಂದರವಿಠಲನಚೆಲುವ ಮೂರುತಿಯ ಕಾಣದ ಕಂಗಳೇಕೆ 5
--------------
ಪುರಂದರದಾಸರು
ಹುಚ್ಚುಕುನ್ನಿ ಮನವೇ ನೀಹುಚ್ಚುಗೊಂಬುದು ಘನವೇ ಅಕಚ್ಚುಕದನತನವ ಬಿಟ್ಟುಅಚ್ಯುತನ ಪದವ ಮುಟ್ಟು ಅಪಸ್ನಾನ ಮಾಡಿದರೇನು - ಸಂಧ್ಯಾನವ ಮಾಡಿದರೇನುಹೀನತನವ - ಬಿಡಲಿಲ್ಲಸ್ವಾನುಭಾವ ಕೂಡಲಿಲ್ಲ 1ಜಪವ ಮಾಡಿದರೇನು - ನೀತಪವ ಮಾಡಿದರೇನುಕಪಟ ಕಲ್ಮಷ ಕಳೆಯಲಿಲ್ಲಕಾಮಿತಾರ್ಥಪಡೆಯಲಿಲ್ಲ2ಮೂಗು ಹಿಡಿದರೇನು - ನೀಮುಸುಕನಿಕ್ಕಿದರೇನುಭೋಗಿಶಯನು ವರ್ತಿಸಲಿಲ್ಲದೇವಪೂಜೆ ಮಾಡಲಿಲ್ಲ 3ಗರುವನಾದರೇನು - ನೀಗೊರವನಾದರೇನುಗುರುವಿನ ಸ್ವಾಮ್ಯವ ತಿಳಿಯಲಿಲ್ಲಗುರುವುಪದೇಶ ಪಡೆಯಲಿಲ್ಲ 4ಹೋಮ ಮಾಡಿದರೇನು - ನೀನೇಮವ ಮಾಡಿದರೇನುರಾಮನಾಮ ಸ್ಮರಿಸಲಿಲ್ಲಮುಕುತಿ ಪಥವ ಪಡೆಯಲಿಲ್ಲ 5ನವದ್ವಾರವ ಕಟ್ಟು ನೀನಡುವಣ ಹಾದಿಯ ಮುಟ್ಟುಅವಗುಣಗಳ ಬಿಟ್ಟುಭಾನುಮಂಡಲ ಮನೆಯ ಮುಟ್ಟು 6ಏನು ನೋಡಿದರೇನು ನೀನೇನ ಮಾಡಿದರೇನುಧ್ಯಾನವನ್ನು ಮಾಡಲಿಲ್ಲಪುರಂದರವಿಠಲನ ಸ್ಮರಿಸಲಿಲ್ಲ7
--------------
ಪುರಂದರದಾಸರು