ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆ ಎಷ್ಟು ಪ್ರೇಮಿಯೋ ಗುರುವು ಎಷ್ಟು ಪ್ರೇಮಿಯೋ ಪ ಎಷ್ಟು ಪ್ರೇಮಿ ಎನ್ನ ಬಿಡದೆ | ಸೃಷ್ಟಿಯಲ್ಲಿ ಕೈಯಪಿಡಿದ ಅ.ಪ ಭಾನುಕೋಟಿ ತೇಜ ವರದ ಸಾನುರಾಗದಿಂದ ಕರೆದು ಜ್ಞಾನ ಶಾಸ್ತ್ರ ಬೋಧಿಸುತ್ತ ಹೀನ ವೃತ್ತಿ ದೂರಿ ಪೊರೆದ 1 ನೀಲವರ್ಣ ಕಂಜನಯನ ನೀಲಕಂಠಮಿತ್ರ ಭಕ್ತ ಪಾಲ ಭೂರಿದುಃಖಭವವ ಧೂಳಿಮಾಡಿ ಬಾಲಗೊಲಿದ 2 ಶ್ರೇಷ್ಠ ಸುಮಹದೇವಪುರದೊಳಿಷ್ಟರಂಗನಾಥ ಭರದಿ ಮುಟ್ಟಿ ಮುಕ್ತಿಯಿತ್ತು ಪುನಃ ಹುಟ್ಟು ಸಾವುಗಳನು ಕಳದ 3
--------------
ರಂಗದಾಸರು
ಏಳಯ್ಯ ರಾಕ್ಷಸಾಂತಕ ದನುಜಸಂಹಾರ ಪ ಏಳಯ್ಯ ರಾಜೀವನಯನ ನವನೀತಚೋರ ಏಳು ಲಕ್ಷ್ಮೀಮನೋಹರ ಹರಿಯೆ ಅ.ಪ ದಿನಪನುದಯಂಗೆಯ್ಯೆ ದಿಕ್ಪಾಲಕರ್ನೆರೆಯೆ ಕನಕಭೂಷಣದ ಕಾಂತೆಯರು ಆರತಿಪಿಡಿಯೆ ಅನುಪಮಗೆ ಜಯವೆಂದು ಬಂದು ನಿಂದೈದಾರೆ ಇನಕುಲನೆ ನಲಿದುಪ್ಪವಡಿಸು ಶ್ರೀಹರಿಯೇ 1 ಪ್ರಹ್ಲಾದ ನಾರದರು ವಾಸಿಷ್ಠ ವಿಶ್ವಾಮಿತ್ರರು ಮಹಮುನಿಗಳತ್ರಿ ಭಾರದ್ವಾಜ ಜಮದಗ್ನಿ ಗೌತಮರು ಬಹುವಿಧದಿ ಕಶ್ಯಪರು ಹನುಮಂತ ತುಂಬುರರು ಹರುಷದಿ ಪಾಡುತ್ತಲೈದಾರೆ ಇನಕುಲನೆ ನಲಿದು 2 ದೇವಗಂಗೆಯಕೊಂಡು ದೇವರ್ಕಳೈದಿದರು ದೇವತಾವಳಿ ಬಂದು ದೇವ ಜಯವೆನುತಿಹರು ದೇವಪುರದಲಿ ನಿಂದ ದೇವಕಿಯ ವರಕಂದ ದೇವ ಲಕ್ಷ್ಮೀಪತಿಯ ದೇವ ನೀನೇಳೈ ಹರಿಯೇ 3
--------------
ಕವಿ ಲಕ್ಷ್ಮೀಶ
ತಂದೆ ನೀನೆ ದಯದಿ ಪಾಲಿಸೆಂದು ಬಂದೆನೋ ಪ ಹಿಂದುಮುಂದು ಗತಿಯದಾರುಯಿಲ್ಲವೆಂಬೆನೊ ಅ.ಪ ಕುಕ್ಷಿಯೊಳಗೆ ಜಗವನಿಟ್ಟುಕೊಂಡು ಪೊರೆವನೆ ಪಕ್ಷಿಗಮನ ನಿಮ್ಮ ನೆನೆವೆ ಭಜಕಗೊಲಿವನೆ 1 ಕ್ಷೀರವಾರ್ಧಿಶಯನ ಗೋಪಿ-ಜಾರ ಪಾಲಿಸೊ ಮಾರಜನಕ ಮುದದೊಳೆನ್ನ ದೂರಲಾಲಿಸೊ 2 ಸುಮಹದೇವಪುರದ ನಿಲಯ-ಸುಜನರಕ್ಷನೆ ಕ್ರಮದೊಳೆನ್ನ ರಕ್ಷಿಸಯ್ಯ-ಕಮಲೆಯಾಣ್ಮನೆ 3
--------------
ರಂಗದಾಸರು
ಧ್ಯಾನಿಸಿ ಆತ್ಮನ ಧ್ಯಾನಿಸಿ ಬ್ರಹ್ಮನ ಧ್ಯಾನಿಸಿ ಸಂತತ ಗುರುವರ್ಯನ ಪ ದುರಿತ ಮೋಹ ದುಃಖ ದೂರ ನೂಂಕಿ ಕಾಯ್ವ ಪರಮ ಪಾವನಮೂರ್ತಿಯ 1 ಕಾಮಿತಾರ್ಥಗಳನು ಪ್ರೇಮದಿಕೊಡುವನ ಭೀಮಮಿತ್ರನ ನೀವು 2 ಪಾಪಪುಣ್ಯವೆಲ್ಲ ಶ್ರೀಪತಿಗರ್ಪಿಸಿ ಗೋಪತಿಯನು ನಂಬಿ ಧ್ಯಾನಿಸಿ 3 ಧರೆಯೊಳು ಮಹದೇವಪುರದ ಶ್ರೀರಂಗನ ಮರೆಯದೆ ಭಾವ[ಶುದ್ಧ]ದೊಳ್ 4
--------------
ರಂಗದಾಸರು
ಬಾರೊ ಬಾರೊ ರಂಗ-ಬಾರೊ ನಮ್ಮನೆಗೆ ಪ ಬೋರನ್ಹಾಕುವೆ ನಡೆಮುಡಿಯ ನಿಮ್ಮಡಿಗೆ ಅ.ಪ ಪರಿಮಳಾಂಬುವಿನಿಂದ-ಪದವ ತೊಳೆಯುವೆನೊ ವರಗಂಧಾಕ್ಷತೆಯನು-ಭರದಿ ಧರಿಸುವೆನೋ 1 ಹೊಸಪಟ್ಟೆಯನು ತಂದು-ಹೊಂದಿಸಿ ರಾಜಿಸುವೆ ಕುಸುಮದಿಂದರ್ಚಿಸಿ ಕೂಡೆ ಸಂತಸವ 2 ಕುಂಕುಮಾಗಿಲು ದಿವ್ಯ ಗುಗ್ಗುಲಹೊಗೆಯ ಬಿಂಕದಿಂದರ್ಪಿಸುವೆನು ಭೋಗಿಸಯ್ಯಾ 3 ಮೇಲೆ ಸದ್ಭಕ್ಷ್ಯ ತಾಂಬೂಲವರ್ಪಿಸುವೆ ಲಾಲಿತ ಮಹಮಂಗಳಾರತಿಯೀವೆ 4 ಬಿಡದೆ ಸಾಷ್ಟಾಂಗವ ನಿಡುವೆ ರಮೇಶ ಪೊಡವಿಯೊಳ್ ಮಹದೇವಪುರದ ಶ್ರೀಹರಿಯೆ5
--------------
ರಂಗದಾಸರು
ಭಜಿಸಿರೋ ಮನದಣಿಯ ಸುಜನಾಬ್ಜ ದಿನಮಣಿಯ ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ ಪ ರಜನೀಕರ ಗುಣಶ್ರೇಣಿ ಅಜಭವ ಸುರಾಗ್ರಣಿಯ ತ್ರಿಜಗಮೋಹನ ಮಣಿಯ ಸೊಬಗಿನ ಕಣಿಯ ಅ.ಪ ಪೊಳೆವ ಮಕುಟದ ಫಣಿಯ ತಿಲಕದಲಿ ರಂಜಿಸುವ ಪ್ರಣವ ಗೋಚರ ಸುಧಾಮಯದ ಕದಪಿನಲಿ ತೊಳಪ ಕುಂಡಲದ ನಾಸಿಕದ ಮೂಗುತಿಯೆಸೆಯೆ ಸುಲಿಪಲ್ಲ ನಗೆಮೊಗದ ಸುಲಭಸೌಂದರÀನ 1 ಪದಕ ಮಣಿಮಯ ಮೌಕ್ತಿಕದ ಹಾರ ತ್ರಿಸರ ಕಂ ಧರ ವೈಜಯಂತಿಯೊಲವಿನ ಬಾವುಲಿ ಮುದದ ಕಂಕಣ ಕರದ ಮುದ್ರೆಯೆಸೆವಾ ಬೆರಳ ಕಂಬು ಮದನಶರಧನು 2 ತರಣಿ ಶತಕೋಟಿ ಕಿರಣತತಿ ಕುಮುದ ವರ್ಣದ ತನುರುಚಿಯಾ ಹರಸುರೇಶ್ವರ ವಿರಿಂಚ್ಯಾದಿ ವಂದಿತಚರಣ ಸರಸಿರುಹ ವರದೇವಪುರದ ಸಿರಿವರನ 3
--------------
ಕವಿ ಲಕ್ಷ್ಮೀಶ
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1 ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2 ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ [ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3 ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4 ವೇದಚೋರನ ತರಿದು ಆದಿಮೂರುತಿ ವರದನ ವಿ- ನೋದದಿ ತೂಗಿದರು ರವಿಸೌಂದರಿಯನಾಡಿದ 5 ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6 ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ ವಾರಿಧಿ ಕೃಷ್ಣನ ತೂಗಿದರು ವರಸತಿಯರು 7 ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8 ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9 ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10 ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11 ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12 ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13 ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
--------------
ಕವಿ ಲಕ್ಷ್ಮೀಶ