ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಂಬುಜೇಕ್ಷÀಣ ನಂಬಿದೇ ನಿನ್ನ ಪ. ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ. ಅನುಪಮ ಚರಿತ ಅಪ್ರಮೇಯನೆ ಕೃಷ್ಣ ತನುಮನಧನಗಳಾ ನಿನಗರ್ಪಿಸುವೆ ಎನ್ನ ಚಿನುಮಯ ರೂಪನೆ ಮನುಮಥ ಪಿತನೆ ನಿನ್ನ ಸರಿಯಾರೋ ಹನುಮದೀಶ ಕೃಷ್ಣ 1 ಉತ್ತಮರುಗಳನು ನಿತ್ಯದಿ ಸೇವಿಪ ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ ತೆತ್ತೀಸ ಕೋಟಿ ದೇವರ್ಕಳು ನಿನ್ನನು ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ 2 ಪದುಮ ಸಂಭವ ಪಿತ ಪದುಮಿಣಿಯರಸನೆ ಒದಗುತ ಭಕ್ತರಾಪ್ತನು ನೀನಲ್ಲೆ ಸದನದಿ ಕಾಯುತ ಮುದವನು ಬೀರುತ ನೀ ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ 3
--------------
ಸರಸ್ವತಿ ಬಾಯಿ
ನೀನೆ ಗುರುವಾಗೆನಗೆ ಕೋನೇರಿವಾಸ ಙÁ್ಞನವಿಲ್ಲದ ಮನುಜ ತಾನಿದ್ದು ಫಲವೇನು ಪ ನಾಳವಿಲ್ಲದ ಘಂಟೆ ಭಾರವಾಗಿದ್ದರೇನು ತೋಳ ಬಲಹಿಲ್ಲದವ ದೊರೆಯಾದರೇನು ಹಾಳು ಭೂಮಿಯು ತನ್ನ ಮೂಲವಾದರೆಯೇನು ಬಾಳಲೀಸದ ಮನೆಯ ಬಲವಂತವೇನು 1 ತಿದ್ದಬಾರದ ತೇಜಿ ಉದ್ದವಾಗಿದ್ದರೇನು ಮೂರ್ತಿ ಮುದ್ದಾದರೇನು ಕದ್ದ ಕಳ್ಳನ ಮಾತು ಬದ್ಧವಾದರೆಯೇನು ಮದ್ದನರಿಯದೆ ಧಾತು ತಿಳಿದಿದ್ದರೇನು 2 ಗೊಡ್ಡು ದನವಿನ ಕ್ರಯವು ಅಡ್ಡವಾದರೆಯೇನು ಬಡ್ಡು ಅರಸಿನ ಬಂಟನೊಡ್ಡೊಕ್ಕರೇನು ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು ಕಡ್ಡಾಯದಂಗಡಿಯಲಿದ್ದು ಫಲವೇನು3 ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು ಅಕ್ಕರಿಲ್ಲದ ತವರು ಇದ್ದು ಫಲವೇನು ಚೊಕ್ಕ ಹೆಂಡತಿಯವಳ್ಗೆ ತಕ್ಕ ವರನಿಲ್ಲದಿರೆ ಕುಕ್ಕೆ ತುಂಬಿದ ರೊಕ್ಕವಿದ್ದು ಫಲವೇನು 4 ಬಡಿಗೆಯಿಲ್ಲದೆ ಚಿನ್ನ ಕಡಗವಾಗುವುದೇನೊ ಪೊಡವಿ ಕಡಿಯದೆ ಬೆಳೆಯ ನೆಡುವುದೇನೊ ಕಡಗೋಲು ಹೊರತಾಗಿ ಬೆಣ್ಣೆ ತೋರುವುದೇನೊ ತುಡುಬು ಬಡಿಯದೆ ಧ್ವನಿಯ ಕೊಡುವುದೇನೊ 5 ಅಡವಿಯೊಳಗಿಹ ವೇಣು ತಿದ್ದಿದರೆ ಮೈಗೊಟ್ಟು ಕಡುಹುಳ್ಳ ದೊರೆಗಳನು ಹೊರವುತಿಹುದು ಶುಕ ಪಕ್ಷಿಯನು ಅಡಗಿಸಿಯೆ ಹಾಲೆರೆದು ಒಡನೆ ಹೇಳಿದ ನುಡಿಯ ತಾ ನುಡಿವುದು 6 ಬಂಟ ಬಿಡದೆ ಸೇವೆಯ ಮಾಳ್ಪ ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು ಕಡೆಯ ಕಾಲಕೆ ತನ್ನ ದೃಢ ಬುದ್ಧಿ ಹಿಂಗುವುದು ಒಡೆಯನನು ಭಜಿಸಲಿಕೆ ಮನವಿಲ್ಲವು 7 ಗುರುವಾಗು ಇಹಪರಕೆ ಸ್ಥಿರವಾದ ಸೌಖ್ಯವನು ಒರೆದು ಮಾರ್ಗವ ತೋರು ಉರಗಗಿರಿವಾಸ ಗುರುವೆಂದು ಭಾವಿಸಿಯೆ ಕರಮುಗಿದು ಶಿರಬಾಗಿ ಸರಸಿಜಾಂಘ್ರಿಯ ನೆನೆವೆ ವರಾಹತಿಮ್ಮಪ್ಪ 8
--------------
ವರಹತಿಮ್ಮಪ್ಪ