ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣ ವಂದಿರೆ ಸಾಕಿನ್ನು ಪ. ಕರುಣ ವಂದಿರೆ ಸಾಕು ಸಿರಿಯರಸನೆ ನಾನಾ ಪರಿಯೊಳನ್ಯರ ಬೇಡಿ ತಿರುಗಲಾರೆನು ಕೃಷ್ಣ ಅ.ಪ. ಪರಮಾಣು ತ್ರುಟಿಲವ ನಿಮಿಷ ಮಾತ್ರ ಯುಗ ಗುರು ಪ್ರಾಣ ಒಳನಾಡಿ ಮುಹೂರ್ತ ಪ್ರಹರ ಮಾಸ ಋತ್ವಯನ ವ- ತ್ಸರಯುಗ ಮಾನವೆಂಬ ಉಪಾದಿಗ ಳಿರಿಸಿ ಭೋಗಗಳನುಂಬ ಮಹಾಕಾಲ ಧುರವಹ ತಾನೆಯೆಂಬಾ ಧೀರತೆಯಿಂದ ಲಿರುವಿ ಲೋಕದಲಿ ತುಂಬಾ ಪಾದ ಪದ್ಮ 1 ತೃಣತರು ಕ್ರಿಮಿಪಕ್ಷಿ ಪಶುನರ ದೇವಕ್ಕ ಳೆಣಿಕಿಯಿಲ್ಲದ ದಿತಿಜಾರಿ ಜೀವರನೆಲ್ಲ ಕುಣಿಸುವ ಬೊಂಬೆಯಂದದಲಾಡಿಸುತ ಲೇಶ ದಣಿವಿಲ್ಲದೆ ಭಕ್ತ ಜನರಿಗೆ ಸುಖಸಾರ ಉಣಿಸಿ ಮದಾಂಧರ ಹಣಿದು ಹಣಿದು ಕುಟ್ಟಿ ಒಣಗಿಸಿ ಬಿಸುಟು ತಿನ್ನುವತ್ತಿದುವಿ ಮೇಲಣ ದುರ್ಗಪತಿಗಳನು ಮನ್ನಣೆಯಿಂದ ತಣಿಸಿ ಕಾಪಾಡುವನು ನೀನಹುದೆಂದು ಮಣಿದು ಬೇಡುವೆ ನಿನ್ನ ಮುರಹರ ಸಲಹಿನ್ನು 2 ಮಾಧವ ಮಂಗಲದಾಯಕ ತವ ಪದ್ಮ ಪಾದ ಸೇವೆಯ ಮಾಡುವಲ್ಲಿಗೆ ಜಾಹ್ನವಿ ಗೋದಾವರಿ ತುಂಗ ಕಾವೇರಿ ಕಲುಷಾವ ನೋದದಿ ಕೃಷ್ಣ ಸರಸ್ವತಿ ಗೋಮತಿ ವೇದವತಿ ಮೊದಲಾದ ನದಿಗಳೆಲ್ಲ ಸಾದರದಲಿ ಸೇರುತ ಬಂದಿಹರೆಂಬ ಗಾಧವಚನ ನಂಬುತ ನಿಂದಿಹೆನು ಕ್ಷೀ ರೋದಧಿ ಗೃಹನಿರತ ಸಾಕಿದೆ ಮುಂದಿ- ನ್ಹಾದಿ ತೋರಿಸು ಸ್ವರತ ಶ್ರೀದ ವೆಂಕಟರಾಜ ಸೇವಕನಾನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು