ಬರಲಿಲ್ಲವೆನುತ ನೀ ಹೊರಗಿಕ್ಕಬೇಡ
ಉರಗಾದ್ರಿವಾಸ ಶ್ರೀ ವೆಂಕಟೇಶ ಪ
ಕಾಸಿಲ್ಲ ಕೈಯೊಳಗೆ ಲೇಸಿಲ್ಲ ಮನೆಯೊಳಗೆ
ವಾಸಿತಪ್ಪಿಯೆ ಬಹಳ ಬೇಸತ್ತೆನು
ಈಸು ಪ್ರಯಾಸ ನಿನ್ನ ದಾಸಗೊದಗಿದ ಮೇಲೆ
ದೋಷವೆನ್ನಲ್ಲಿಲ್ಲ ಶೇಷಾದ್ರಿವಾಸ 1
ಗೆಲುವಿಲ್ಲ ಮನದೊಳಗೆ ಬಲವಿಲ್ಲ ಕಾಯದೊಳು
ಹೊಲಬುದಪ್ಪಿಯೆ ಬಹಳ ಸುಲಿವಾದುದು
ಫಲವೇನು ಇದರೊಳಗೆ ಕೆಲಸವೇನಿಹುದಿಲ್ಲ್ಲಿ
ಸುಲಭದೊಳು ಬೇರೊಂದು ಪರಿಯ ನೋಡಯ್ಯ 2
ಕತ್ತಲೆಯ ರಾಜ್ಯವನು ಆದಿತ್ಯನಾಳುವ ತೆರದಿ
ಸುತ್ತಗಳನೆಲ್ಲವನು ಕಿತ್ತು ಹಾರಿಸಿಯೆನ್ನ
ಹತ್ತಿರದಿ ಮೈದೋರು ಭಕ್ತವತ್ಸಲನೆ 3
ಹಿರಿಯೊಳು ಆರ್ಜಿಸಿದ ಗೃಹಕೃತ್ಯವೆಂಬುದಿದು
ಕೊರಳಡಿಗೆ ಸಿಲುಕಿರ್ದ ಸೆರೆಯಾಯಿತೊ
ಹರುಷವಿಲ್ಲಿದರೊಳಗೆ ಬರುವ ಗತಿಯನು ಕಾಣೆ
ದರುಶನಕೆ ಬಗೆದೋರು ದೊರೆ ವೆಂಕಟೇಶ 4
ಮಾತು ತಪ್ಪಿತು ಎಂದು ಭೀತಿಗಿಕ್ಕಲುಬೇಡ
ಸೋತುದೈ ಕೈಯೆನಗತೀತ ಮಹಿಮ
ಕಾತುರವು ಮನದೊಳಗೆ ಕಾಣಬೇಕೆಂದೆಂಬ
ಪ್ರೀತಿಯಾಗಿದೆ ಜಗನ್ನಾಥ ನಿನ್ನೆಡೆಗೆ 5
ಒಂದು ಪರಿಯನು ನೀನು ತಂದು ತೋರಿದರೀಗ
ಇಂದೆ ನಾನೇಳುವೆನು ಮಂದಿವಾಳದಲಿ
ಚಂದದಲಿ ಮಡದಿ ಮಕ್ಕಳ ಸಹ ಕರಕೊಂಡು
ಬಂದು ನೋಳ್ಪೆವು ನಿನ್ನ ಆನಂದ ಮೂರುತಿಯ 6
ಅಣಿಮಾಡಿ ನೀನೆನಗೆ ಮನದಣಿವ ತೆರನಂತೆ
ಕ್ಷಣವಾದ ಕೆಲಸಗಳು ನಿನಗೆ ಘನವಲ್ಲ
ತನಿರಸವನೆನಗೀಯೊ ಜನ ಮೆಚ್ಚುವಂತೆ 7