ಒಟ್ಟು 9 ಕಡೆಗಳಲ್ಲಿ , 9 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ 1 ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ 2 ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು | ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ || ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ | ಕಕ್ಕಸದಲಿ ಬಲು ಕಕ್ಕಲಾತಿಯಲಿ 3 ಬಿರಬಿರನೆ ತಾ ಬಂದು ಬೆದರಿ ಎನಗಂದು | ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ || ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು | ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ 4 ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ | ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ || ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು | ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ5 ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು | ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ || ಭಂಡು ಮಾಡತಾನೆ ಭಂಡಿಯ ಗೋವಳಗಿಂದು | ದಂಡಿಸವ್ವಾ ದಂಡವನು ಕೊಡು ನೀನು 6 ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ | ಉದ್ದಂಡನಿವನು ತಂಡ ತಂಡದಲಿ ತುರು- || ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು7
--------------
ವಿಜಯದಾಸ
ಧರ್ಮದಮಾತು ಹಳಸಿ ಬಂದಿತು ಯುಗ ಧರ್ಮದಿಂದದು ವನವನು ಸೇರಿತು ಪ ಆಟ ನೋಟಕೆ ಉಂಟು ಪೋಟ ಪುಂಡರಿಗುಂಟು ಮಾರ ಕಟ್ಟಲುಂಟು ಕಾಟಕ ದೊರೆಗೆ ದಂಡವನು ಕೊಡಲಿಕುಂಟು ಚಂದ್ರ ಜೂಟಗರ್ಪಿತವೆಂದು ಕೊಡಲು ದ್ವಿಜರಿಗಿಲ್ಲ 1 ಕಲ್ಲು ಮಣ್ಣಿಗೆ ಇಕ್ಕಲುಂಟು ಆಕಳ ಎಮ್ಮೆ ಕೊಳ್ಳಲಿ ಕುಂಟು ಕೈಯೊಳು ಹೊನ್ನು ಚಿನ್ನಗಳ ಬಂಗಾರ ಮಾಡಿಸಲುಂಟು ಇಲ್ಲದೇಹಿ ಎಂದು ಯಾಚಿಪದ್ವಿಜರಿಗೆ 2 ಬಣ್ಣ ಸಣ್ಣಗಳ ಕೊಡಲಿ ಕುಂಟು ಕಾಮನ ತನ್ನ ಕೈಯಾರೆ ಲಕ್ಷ್ಮೀಶಗರ್ಪಿತವೆಂದು ಮನ್ನಿಸಿ ದ್ವಿಜರಿಗೀಯಲಿಕೆ ದುಡ್ಡುಗಳಿಲ್ಲ 3
--------------
ಕವಿ ಪರಮದೇವದಾಸರು
ನಾರಾಯಣಯೆಂಬೊ ನಾಮವನು ನೆನೆದರೆ ಹಾರಿ ಹೋಹುದು ಜನ್ಮಜನ್ಮದ ಪಾಪಗಳು ಮುಕ್ತಿದೋರಿಸು ಮುರಾರಿ ಪ. ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ ಸುಕುಮಾರನೆನಿಸಿಕೊಂಡು ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ ದುಷ್ಕøತ್ಯದ ಫಲದಿಂದ ಅಂತ್ಯಜಳನು ಕಂಡು ಕಾ- ಅರಿತರಿಯದೆ 1 ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ ಹುಲ್ಲೆನೋಟದ ಭಾವಕಿ ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ ಸೆರಗ ಪಿಡಿದ 2 ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು ಹಿಂಡು ಬಲು ಘೋರ ಎನಿಸಿಪ್ಪುದು ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ ಛಲವೊಂದೆ ಎನಗೆ ಎಂದ3 ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ ನಿನಗೊಲಿವೆನೆಂ[ದಳು] ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ ಮೊತ್ತಕೊಳಗಾಗದಿರೊ 4 ಆಗದಾಗದು ಎನ್ನ ಕುಲಬಂಧು ಬಳಗವÀನು ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು 5 ಹಾಲಂತ ಕುಲವ ನೀರೊಳಗದ್ದಿಪೂರ್ವದ ಶೀಲವನಳಿದು ಸತಿಯೊಡಗೂಡಿ ತಾನು ಚಾಂ- ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ ಆಲಂಬನದಲಿ ಅಜಾಮಿಳನು ಇರುತಿರಲಾಗ ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು ಯಮನಾಳುಗಳು ಇಳಿದರಾಗ 6 ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ] ಘುಡು‌ಘುಡಿಸುತಲಿ ನಿಂತರು ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು ಲಾಲಿಸಿದ ಸ್ವಾಮಿ 7 ಮರಣಕಾಲದಿ ಶ್ರೀಹರಿಯೆಂಬ ನಾಮವನು ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ ಉರದೊಳೊಪ್ಪುವ ತುಳಸಿದಂಡೆ ಪೀತಾಂ- ಬರವು ಗದೆ ಶಂಖ ಚಕ್ರ ದ್ವಾದಶನಾಮವನು ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು 8 ಪುಂಡರೀಕಾಕ್ಷನ ಭೃತ್ಯನ ಭಾಧಿಸುವ ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ- ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ ಉದ್ದಂಡರಹುದೆಂದರಾಗ 9 ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ 10 ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು ಬಿದ್ದ ಕಾಯವನು ಭಾದಿಸಿದವರ್ಯಾರು ಉ- ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ ಅದ್ದಿದೆ ನೂರೊಂದು ಕುಲವ ನರಕದೊಳೆಂದು ತಾನತಿ ಮರುಗುತ 11 ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧÀ ಜನರು ಮದನ ಬಾಧೆಗೆ ಸಿಲುಕಿ ದುಷ್ಟ ತಾಪವ ಪೊತ್ತೆ ಜನನಿಂದಕನಾದೆ ಅಪ್ರತಿಮ ಅನಂತಪಾತಕಿ ಭುವನದಲಿ ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ ವಿಧಿ ಎಂದನು 12 ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು ದುಷ್ಟಯವÀುದೂತರನು ಕಂಡು ಚಂಡಾಲತಿಗೆ ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ ಗಟ್ಯಾಗಿ ಧ್ಯಾನಿಸಿದನು 13 ತನ್ನ ನಾಮವ ನೆನೆವ ಭಕ್ತರಾದವರೆಲ್ಲ ಧನ್ಯರಿವರಹುದೆಂದು ಜಗವರಿಯಬೇಕೆಂದು ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು ಎನ್ನಯ್ಯ ಏಳೆಂದು ಕೈಲಾಗವÀನು ಕೊಡಲು ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ . ಸನ್ನಿಧಿಗೆ ನಡೆದ 14 ಜಲಜನಾಭನ ದಿವ್ಯನಾಮವನು ನೆನೆದರೆ ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ ಸಲುವರಲ್ಲೆಂದ ಯಮನು ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು 15
--------------
ಹೆಳವನಕಟ್ಟೆ ಗಿರಿಯಮ್ಮ
ನಿಖಿಳ ಗುಣಪೂರ್ಣ ಪ ಭಾರತೀಶ ಸಕಲಪ್ರಾಣಿಗಳ ಹೃದಯಾಬ್ಜ ವಾಸ ಸುರೇಶಅ.ಪ ವಾತಸುತನಾಗಿ ರಘುನಾಥ ಪ್ರಿಯ ದೂತ ಬಲುಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ 1 ಲಂಡ ಕೀಚಕ ಬಕರ ಮಂಡೆಯನು ಒಡೆದು ಉ-ದ್ದಂಡ ಮಗಧಾಧಿಪನ ದಂಡವನು ಸೀಳಿಭಂಡ ಕೌರವರ ಶಿರ ಚೆಂಡಾಡಿ ಪ್ರಬಲ ರಣ-ಮಂಡಲದಿ ಚಂಡರಿಪು ದಂಡೆಗಳ ಖಂಡಿಸಿದೆ 2 ಭೃಂಗ ಮೂಜ್ಜಗದೊಳಗೆತುಂಗ ಭವಭಂಗ ದಯಾಪಾಂಗ ಯತಿಪುಂಗವನೆ3
--------------
ವ್ಯಾಸರಾಯರು
ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ ನಿನ್ನವಳೆನಿಸೊ ಎನ್ನ ಪ. ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ. ಜನನ ಮರಣ ಕಷ್ಟ ಘನಭವ ಜಲಧಿಯೊಳ್ ಮುಣಗಿ ಮುಣಗಿ ದಡವನು ಕಾಣದಿರುವೆನೊ 1 ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು 2 ಭಕ್ತಿ ಜ್ಞಾನವು ನಿನ್ನ ಭಕ್ತ ಸಂಗವು ವಿ- ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ 3 ನಿತ್ಯ 4 ಸಾರ ಉದ್ಘೋಷಿಸುವಂತೆ ಬುದ್ಧಿಪ್ರೇರಕನಾಗಿ ಶುದ್ಧ ಜ್ಞಾನವನಿತ್ತು 5 ನಿನ್ನ ಪದುಮ ಪಾದವನು ನಂಬಿದ ಎನ್ನ ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ6 ಅಂತರಂಗದ ಧ್ಯಾನ ನಿಂತು ನೀ ನಡಿಸುತ ಅಂತರಂಗದಿ ನಿನ್ನ ಶಾಂತರೂಪವ ತೋರಿ 7 ತಂದೆ ಮುದ್ದುಮೋಹನ ಗುರುಹೃದಯ ಮಂದಿರ ನಿವಾಸ ಎಂದೆಂದಿಗಗಲದೆ 8 ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ9
--------------
ಅಂಬಾಬಾಯಿ
ಬಣ್ಣ ಬಣ್ಣದ ಬುಗುರಿಯಾಟವ ಅಡುತಿಯರುವೆಯಾ ರಂಗ ಗಿಣ್ಣು ಗಿಣ್ಣಲಿ ಕನಿತುನಿಂತಿಹ ಹಣ್ಣನಿದನು ಕಾಣೆಯಾ ಪ ಮಮತೆ ಇಲ್ಲವೆ ಹೇದೇವ ಮಾತಿಗೆ ಮರುಳುಹೋಗಿ ಅ.ಪ ನಿನ್ನ ಊರಲಿ ನೀನು ಕುಳಿತರೆ ಭಾಗ್ಯವೆನಗದು ಆಯಿತೆ ನನ್ನ ಇಳಿಯಿಸಿ ಅರಿವು ಕೊಟ್ಟು ನಡೆಯ ಕಲಿಸಿದೆ ಏತಕೆ ಇನ್ನು ಬರದೇ ಇರುವೆಯಾ ನನ್ನಲ್ಲಿ ಸಹನೆ ಇಲ್ಲವೆಂದು ಅರಿಯಲಾರೆಯಾ ದೇವನೇ 1 ನೆನಪು ಕೊಟ್ಟಿಹೆ ರಂಗ ಆಸೆ ಮತಿಯು ದಾರಿ ನೋಡಿದೆ ದೂರ ದಡವನು ದಾಟಿಸೈ ನಾನು ಅದರೊಳು ನಿಂತಿಹೆ ಮಾಧವ ಮತ್ತೆಯಾರನು ಕೇಳಲಿ 2
--------------
ಸಂಪತ್ತಯ್ಯಂಗಾರ್
ಮಾರ್ಗವೇ ಕಾಣಿಸದು ವೈಕುಂಠಕೆ ಪೇರ್ಗಿರಿಗಳ ದಾಂಟಲಾರ್ಗಳವೋ ಕಾಣೆ ಪ ಭೋರ್ಗರೆವುದು ಬಲಮಾರ್ಗದಿ ಜಲನಿಧಿ ಕಾರ್ಗಡಲು ಎಡ ಮಾರ್ಗದಿ ಕಗ್ಗತ್ತಲೆ ಅ.ಪ ಹಿಂದೆ ಮೃಗಂಗಳ ಸಂದಣಿಯಾರ್ಭಟ ದಿಂದ ಮನದ ದೈರ್ಯಕುಂದಿದುದಕಟ ಮ ಹಾಂಧಕೂಪದೊಳೆನ್ನ ಎದೆ ಕುಸಿದು ಬಂಧಿಸಿತೆನ್ನ ಕಾವ ಬಂಧುಗಳಿಲ್ಲ 1 ಕೂಪದಿ ಕ್ರಿಮಿಗಳು ಕೋಪಿಸಿ ತನುವನು ಈ ಪರಿಯೆಲ್ಲವು ತಾಪತ್ರಯಂಗಳ ಧೂಪ ದೀಪಗಳ ಪಾಪದ ಫಲವೋ 2 ದಡವನು ಕಾಣದೆ ತಡಬಡಿಸುವೆನೋ ಮೃಡನು ತಾ ಮಾಂಗಿರಿಯೊಡೆಯ ಶ್ರೀರಂಗ ಕಡುಪಾತಕಿಯ ಕೈಹಿಡಿದೆತ್ತಿ ಕೃಪೆಯಿಂದ ತಡಿಗೆ ಸೇರಿಸಿ ನಿನ್ನ ಅಡಿಯಪಿಡಿಸೋ ದೇವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆ ಪುಟ್ಟಿಸಿದಿ ನೀ ಸಾಕಲಾರದೆ ಜಗ-ದೇಕ ಕಾರಣಪುರುಷನೆ ಕೃಷ್ಣ ಪ ವಾಕು ಚಿಂತಿಸೆ ಇಂಥಕಾಕು ಮಾಡುವುದುಚಿತವೆ ಕೃಷ್ಣ ಅ.ಪ. ಒಡಲಿಗನ್ನವ ಕಾಣೆ ಉಡಲು ಅರಿವೆಯ ಕಾಣೆಗಡಗಡನೆ ನಡುಗುತಿಹೆನೋ ಕೃಷ್ಣಮಡದಿ ಮಾತೆಯರ ಬಿಟ್ಟು ಒಡಹುಟ್ಟಿದವರ ಬಿ -ಟ್ಟಡವಿ ಪಾಲಾದೆನಲ್ಲೋ ಕೃಷ್ಣಕುಡುತೆ ಕೊಡುವವರಿಲ್ಲ ನುಡಿಯ ಕೇಳುವರಿಲ್ಲಬಡತನವು ಕಂಗೆಡಿಸಿತೋ ಕೃಷ್ಣಕಡೆ ಹಾಯಿಸುವರ ಕಾಣೆ ನಡುಮಡುವಿನೊಳು ಕೈ ಬಿಡದೆ ದಡವನು ಸೇರಿಸೋ ಕೃಷ್ಣ 1 ಕೊಟ್ಟವರ ಸಾಲವನು ಕೊಟ್ಟು ತೀರಿಸದವರಪೊಟ್ಟೆಯೊಳು ಪುಟ್ಟಲಾಯ್ತೋ ಕೃಷ್ಣಎಷ್ಟು ಜನುಮದಿ ಮನಮುಟ್ಟಿ ಮಾಡಿದ ಕರ್ಮಕಟ್ಟೀಗ ಉಣಿಸುತಿಹುದೋ ಕೃಷ್ಣಸೃಷ್ಟಿಯೊಳಗೆನ್ನಂಥ ಕೆಟ್ಟ ಪಾಪಿಷ್ಠ ಜನಘಟ್ಟಿಸಲಿಲ್ಲವೇನೋ ಕೃಷ್ಣವಿಠ್ಠಲನೆ ನಿನ್ನ ಮನಮುಟ್ಟಿ ಭಜಿಸಿ ಹಿಂದೆಎಷ್ಟು ಜನ ಬದುಕಲಿಲ್ಲೋ ಕೃಷ್ಣ 2 ಆಳು ದೇಹವು ಗೇಣು ಕೀಳಾಗಿ ಪಲ್ಕಿರಿದುಖೂಳ ಜನರ ಮನೆಗೆ ಕೃಷ್ಣಹಾಳು ಒಡಲಿಗೆ ತುತ್ತು ಕೂಳಿಗೆ ಹೋಗಿ ಅವರವಾಲೈಸಲಾರೆನಲ್ಲೋ ಕೃಷ್ಣಬಾಳು ಈ ಪರಿಯಾದ ಮ್ಯಾಲೆ ಭೂಮಿಯಲಿ ಬಹುಕಾಲ ಕಳೆಯುವುದುಚಿತವೆ ಕೃಷ್ಣಆಲಸ್ಯ ಮಾಡದಲೆ ಈ ವ್ಯಾಳ್ಯದಲಿ ಅರಿತುಪಾಲಿಸಲು ಬಹು ಕೀರ್ತಿಯೋ ಕೃಷ್ಣ 3 ಸಿರಿ ಅರಸನೆಂದು ಶ್ರುತಿ ಸಾರುತಿದೆಬಂದುದೀಗೇನು ಸಿರಿಯೋ ಕೃಷ್ಣಒಂದೊಂದು ನಿಮಿಷ ಯುಗಕಿಂತಧಿಕವಾಗುತಿದೆಮುಂದೋರದ್ಹಾಂಗಾಯಿತೋ ಕೃಷ್ಣಸಂದೇಹವಿಲ್ಲ ಗೋವಿಂದ ಶ್ರೀಪದದಾಣೆತಂದೆ ನೀ ರಕ್ಷಿಸದಿರೆ ಕೃಷ್ಣಮುಂದೆ ಭಜಿಸುವರು ಹೀಗೆಂದು ವಾರುತೆ ಕೇಳಿಬಂದುದಪಕೀರ್ತಿ ಮಾತು ಕೃಷ್ಣ 4 ವತ್ಸರ ಈರೀತಿ ಕಾಲಕಳೆದೆನೋ ಕೃಷ್ಣವ್ಯರ್ಥವಾಯಿತು ಜನುಮ ಸಾರ್ಥಕಾಗದು ಕಣ್ಣುಕತ್ತಲೆಗವಿಸಿತಲ್ಲೋ ಕೃಷ್ಣಇತ್ತ ಬಾರೆಂತೆಂದು ಹತ್ತಿಲಿಗೆ ಕರೆದೊಂದುತುತ್ತು ಕೊಡುವರ ಕಾಣೆನೋ ಕೃಷ್ಣವಿಸ್ತರಿಸಲಾರೆ ಇನ್ನೆತ್ತ ಪೋಗಲೊ ನಿನ್ನಚಿತ್ತವ್ಯಾತಕೆ ಕರಗದೋ ಕೃಷ್ಣ 5 ಆರು ಗತಿ ನಿನಗಧಿಕರಾರು ಧಾರುಣಿಯೊಳಗೆತೋರಿಸೈ ಕರುಣನಿಧಿಯೆ ಕೃಷ್ಣಈರೇಳು ಲೋಕಕಾಧಾರವಾದವಗೆ ಬಲುಭಾರವಾದವನೆ ನಾನು ಕೃಷ್ಣಮೀರಿ ನುಡಿಯಲು ಹದಿನಾರೆರಡು ಪಲ್ಗಳುಬೇರು ಕಳಕಳಯಿತೋ ಕೃಷ್ಣತೋರು ಬಂಕಾಪುರದ ಧಾರುಣಿಪುರವಾಸವೀರ ನರಸಿಂಹದೇವ ಕೃಷ್ಣ 6 ಹರಿಯಾತ್ರೆ ಮಾಡಲಿಲ್ಲ ಹರಿಮೂರ್ತಿ ನೋಡಲಿಲ್ಲಹರಿದಾಸ ಸÀಂಗವಿಲ್ಲ ಕೃಷ್ಣಹರಿಸ್ಮರಣೆ ಮಾಡಲಿಲ್ಲ ಸುರನದಿಯ ಮೀಯಲಿಲ್ಲಧರಣಿ ಸಂಚರಿಸಲಿಲ್ಲ ಕೃಷ್ಣಅರಿತರಿತು ಮನ ವಿಷಯಕೆರಗಿ ಹರುಷವ ತಾಳಿಬರಿದಾಯಿತಾಯುವೆಲ್ಲ ಕೃಷ್ಣಮರುತಾಂತರ್ಗತ ಸಿರಿಯರಸ ಹರಿಯೆಂದುಹರುಷಾಬ್ದಿ ಮಗ್ನನಲ್ಲ ಕೃಷ್ಣ7 ಹರಿನಾರಾಯಣನೆಂದು ಕರವೆತ್ತಿ ಮುಗಿದೊಮ್ಮೆ ಮೈ ಮರೆದು ನಟಿಸಲಿಲ್ಲ ಕೃಷ್ಣಹರಿಸ್ಮರಣೆ ಸ್ಮರಿಸಿ ಸಿರಿತುಳಸಿ ಪುಷ್ಪವನುಕರವೆತ್ತಿ ನೀಡಲಿಲ್ಲ ಕೃಷ್ಣಸರ್ವಜ್ಞರಾಯರು ವಿರಚಿಸಿದ ಗ್ರಂಥವನುದರುಶನವೆ ಮಾಡಲಿಲ್ಲ ಕೃಷ್ಣಸ್ಮರಿಸಲಾರದ ಪಾಪ ಸ್ಮರಣೆಪೂರ್ವಕ ಮಾಡಿಸ್ಥಿರಭಾರನಾದೆನಲ್ಲೋ ಕೃಷ್ಣ 8 ದುರುಳಜನರೊಡನಾಡಿ ಹರಿಣಾಕ್ಷಿಯರ ಕೂಡಿಸರಿ ಯಾರು ಎಂದು ತಿರುಗಿ ಕೃಷ್ಣನಿರುತ ಕ್ಷುದ್ರವ ನೆನೆಸಿ ನೆರೆದೂರ ಮಾರಿ ಹೆಗ್ಗೆರೆಗೋಣನಂತೆ ತಿರುಗಿ ಕೃಷ್ಣಪರರ ಅನ್ನವ ಬಯಸಿ ಶರೀರವನೆ ಪೋಷಿಸಿಶಿರ ಒಲಿದು ಶಿಲೆಗೆ ಹಾಯಿದು ಕೃಷ್ಣಶರಣವತ್ಸಲನೆಂಬೊ ಬಿರುದು ಪಸರಿಸುವಂಥಕರುಣ ಇನ್ನೆಂದಿಗಾಹುದೊ ಕೃಷ್ಣ 9 ಉರಗ ಫಣಿ ತುಳಿಯಲೊಎರಡೊಂದು ಶೂಲಕ್ಹಾಯಲೊ ಕೃಷ್ಣಕೊರಳಿಗ್ಹಗ್ಗವ ಹಾಕಿ ಮರವೇರಿ ಕರಬಿಡಲೋಗರಗಸದಿ ಶಿರಗೊಯ್ಯಲೋ ಕೃಷ್ಣಕರುಣವಾರಿಧಿ ಎನ್ನ ಕರಪಿಡಿದು ಸಲಹದಿರೆಧರೆಯೊಳುದ್ಧರಿಪರ್ಯಾರೋ ಕೃಷ್ಣ 10 ಎಷ್ಟು ಹೇಳಲಿ ಎನ್ನ ಕಷ್ಟ ಕೋಟಿಗಳನ್ನುಸುಟ್ಟೀಗ ಬೇಯ್ಯುತಿಹವೋ ಕೃಷ್ಣಕಷ್ಟಬಟ್ಟ ಮಗನೆಂದು ದೃಷ್ಟಿ ನೀರೊರೆಸೆನ್ನಪೊಟ್ಟೆಯೊಳ್ಪಿಡಿವರ್ಯಾರೊ ಕೃಷ್ಣಕೃಷ್ಣನಾಮ ವಜ್ರಕ್ಕೆ ಬೆಟ್ಟ ದುರಿತವು ನೀಗಿಥಟ್ಟನೆ ಬಂದು ನೀನು ಕೃಷ್ಣಇಷ್ಟವನು ಸಲಿಸಿ ಗುಟ್ಟ್ಟಲಿ ಶ್ರೀರಂಗವಿಠಲ ಎನ್ನ ಕಾಯೋ ಕೃಷ್ಣ 11
--------------
ಶ್ರೀಪಾದರಾಜರು
ನಾರಾಯಣ ನಿನ್ನ ನಾಮವನು ನೆನೆದರೆ |ಹಾರಿಹೋಹುದು ಪಾಪ ಜನ್ಮಜನ್ಮಾಂತರದಿ |ಶ್ರೀ ರಮಣ ನಿನ್ನ ಕೃಪೆಯಿತ್ತೆಮಗೆ ಮುಕ್ತಿಯ -ದಾರಿ ತೋರಿಸೊ ಮುರಾರಿ ಪಸಕಲ ವೇದ ಪುರಾಣ _ ಶಾಸ್ತ್ರವನು ತಿಳಿದೋದಿ |ತಿಯಿಂಭಕುತ ತಾಯ್ತಂದೆಗಳ ಚಿತ್ತವಿಡಿದರ |ರಕುಷಣೆಯ ಮಾಡಿ ಜಗದೊಳಗೆ ವಿಖ್ಯಾತ ಸುಕು -ಮಾರ ತಾನೆಸಿಸಿಕೊಂಡ1ಪ್ರಕೃತಿಯಲಿ ಹೋಮಕೋಸ್ಕರ ಸಮಿಥೆ ತರಹೋಗಿ |ಶುಕರುಮಗಳಿಂದ ಚಾಂಡಾಲಿಲೆಯ ಕಂಡು ತಾ - |ಮೂಕನಾಗಿನಿಂದು ಮೈಮರೆದು ಪಾತಾಕಿಯ ಬಹ -ದುರಿತವನು ತಾನರಿಯದೆ 2ನಿಲ್ಲು ನಿಲ್ಲೆಲೆ ಕಾಂತೆ, ನಿನಗೊಲಿದೆ ನೀನಾರೆ |ಸೊಲ್ಲಿಸೆನ್ನೊಡನೆ ಸತಿಯರ ಕುಲಕೆಕಟ್ಟಾಣಿ |ಚೆಲ್ಲೆನ್ನ ಮೇಲೆ ಕರುಣವನಿಂತು ಕೋಮಲೆಯೆನಿಲ್ಲೆಂದು ಸೆರಗ ಪಿಡಿದ 3ಎಲೊವಿಪ್ರ ಕೇಳು ನಾ ಕುಲಹೀನೆ ನಮ್ಮ ಮನೆ |ಹೊಲನೆನದು ಗೋಮಾಂಸ ಚರ್ಮದಾ ಹಾಸಿಕೆಯು |ಎಲುವಿನಾ ರಾಶಿ ಒದರುವ ನಾಯ ಹಿಂಡುಗಳು -ಬಹು ಘೋರಘೋರ ವಿಹುದು 4ಬಲೆಗೆ ಸಿಲ್ಕಿದ ಪಕ್ಷಿ ಬೇಟೆಗಾರನದಲೇ ? |ಕುಲವನ್ನು ಕೂಡೆ ನಾ ಕಾಮಿನೀರನ್ನಳೆ |ಚಲದಿಂದ ಬದುಕುವೆನು ಸುಖದಿಂದಲಿರುವೆ ನೀಒಲವು ನನಗೊಂದೆ ಎಂದ 5ವ್ಯರ್ಥ ಎನ್ನೊಡನೆ ಮಾತೇತಕೆಲೊ ಹಾರುವಾ |ಚಿತ್ತ ನನ್ನಲ್ಲಿ ಇದ್ದರೆ ಹೋಗಿ ನೀ ನಿನ್ನ |ಹೆತ್ತ ತಾಯ್ತಂದೆಯರ ಕೇಳು ಸಮ್ಮತಿಸಿದರೆ -ಮತ್ತೆ ನಿನಗೊಲಿವೆನೆನಲು 6ಅತ್ತ ಕಾಮಿನಿಯ ಒಡಗೊಡಿ ತನ್ನಯ ಪಿತನ |ಹತ್ತಿರಕೆ ಹೋಗಿ ಕೇಳಿದರೆ ಆತನು ಎಂದ |ಉತ್ತಮದ ಕುಲವನೀಡಾಡಿ ಈ ಪಾತಾಕಿಯ -ಹಸ್ತಕೊಳಗಾಗದಲಿರೈ 7ಆಗದಾಗದು ನನ್ನ ಕುಲಬಂಧು - ಬಳಗವನು |ನೀಗಿ ನಿನ್ನೊಡನೆ ಕೂಡುವೆನೆಂಬ ಮತವೆನಗೆ |ನಾಗಭೂಷಣನ ಪಣೆಗಣ್ಣಿಲುರಿದನ ಬಾಣತಾಗಿತೆನ್ನೆದೆಗೆ ಎಂದ 8ಕೂಗಿ ಹೇಳುವೆ ನಿನ್ನ ಕುಲವಳಿಯದಿರು ಎಂದ |ಹೋಗಿ ಕೂಡದೆ ನಿನ್ನ ಹೆತ್ತ ತಾಯ್ತಂದೆಗಳಿ - |ಗಾಗದಿದ್ದರೆ ಆಚೆಯಾ ಮನೆಯೊಳಗೆ ಹೋಗಿಇಬ್ಬರೂ ಇರುವೆವೆಂದ 9ಹಾಲಂತ ಕುಲವ ನೀರೊಳಗದ್ದಿ ಪೂರ್ವದಾ |ಶೀಲವನ್ನಳಿದು ಸತಿಯಳ ಕೂಡಿ ತಾನು ಚಾಂ - |ಡಾಲಿತಿಗೆ ಹತ್ತು ಮಕ್ಕಳನು ಪಡೆಕೊಂಡವರಲೀಲೆ ನೋಡುತಲಿ ಹಿಗ್ಗಿ 10ಬಾಳಿನಲ್ಲೀ ರೀತಿ ಅಜಮಿಳನು ಇರುತಿರಲು |ಕಾಲ ಬಂದೊದಗಿತ್ತು ಕರೆಯಿರೆವೆ ಪಾತಕನ |ಜೋಲುದುಟಿಡೊಂಕು ಮೋರೆಯ ಅಬ್ಬರದಿ ಯಮನ -ಆಳುಗಳು ಬಂದರಾಗ 11ಎಡಗೈಯೊಳಗೆಪಾಶ ಹಿಡಿದು ಚಮ್ಮತಿಗೆಗಳ |ಒಡನೆ ಜಾವಳಿನಾಯಿ ವಜ್ರಮೋತಿಯ ಕಾಯಿ |ತುಡಿಕಿರೋ ಕೆಡಹಿ ಕಟ್ಟಿರೋ ಪಾತಕನನೆಂದುಘುಡುಘುಡಿಸಿ ಬಂದರಾಗ 12ಗಡಗಡನೆ ನುಡುಗಿ ಕಂಗೆಟ್ಟು ಅಜಮಿಳನು ತಾ |ಕಡೆಯ ಕಾಲಕೆ ಅಂಜಿ ಮಗನ ನಾರಗನೆಂದು |ಒಡನೊಡನೆ ಕರೆಯಲ್ಕೆ ಯಮನಾಳ್ಗಳೋಡಿದರುಮುಟ್ಟಿದುದು ಹರಿಗೆ ದೂರು 13ಕೊರಳ ತುಳಸಿಯ ಮಾಲೆಯರಳ ಪೀತಾಂಬರದ |ವರಶಂಖ ಚಕ್ರದ್ವಾದಶನಾಮಗಳನಿಟ್ಟ |ಹರಿಯ ದೂತರು ಅಂಜಬೇಡ ಬೇಡನ್ನುತಲಿಹರಿದೋಡಿಬಂದರಲ್ಲಿ 14ಪುಂಡರೀಕಾಕ್ಷನೀ ಭೃತ್ಯನನು ಬಾಧಿಸುವ |ಲಂಡಿರಿವರಾರು ನೂಕಿರಿ ನೂಕಿರೆಂತೆಂದು |ದಂಡವನು ತೆಗೆದು ಬೀಸಾಡಿ ಯಮನವರಿಗು - |ದ್ದಂಡರಿವರೆಂದರಾಗ 15ತಂದೆ ಕೇಳಿರಿ ಒಂದು ಭಿನ್ನಪವ ಲಾಲಿಸಿರಿ |ಒಂದು ದಿನ ಹರಿಯೆಂದು ಧ್ಯಾನವನ್ನರಿಯ ನಾವ್ - |ಬಂದಾಗ ಆತ್ಮಜನ ನಾರಗನೆ ಎಂದೆನಲುಕುಂದಿದುವೆ ಇವನ ಪಾಪ ? 16ಹಂದೆ - ಕುರಿಗಳಿಗೆ ನಿಮಗಿಷ್ಟು ಮಾತುಗಳೇಕೆ |ನಿಂದಿರದೆ ಹೋಗಿ ನಿಮ್ಮೊಡೆಯನಿಗೆ ಪೇಳೆನಲು |ಸಂದಲಾ ಯಮಭಟರು ಅಜಮಿಳನ ಹರಿಭಟರುತಂದರೈ ವೈಕುಂಠಕೆ 17ಮದ್ಯಪಾನವ ಮಾಡಿ ಪೆಂಗಳನು ಒಡಗೂಡಿ |ಅದ್ದಿದೆನು ನೂರೊಂದು ಕುಲವ ನರಕದೊಳೆಂದು |ಹದ್ದಿನಾ ಬಾಯೊಳಗಿನುರಗನಂತಜಮಿಳನುಇದ್ದನವ ನೆರೆಮರುಗುತ 18ವಿಪ್ರಕುಲದಲಿ ಹುಟ್ಟಿ ವೇದಶಾಸ್ತ್ರವನೋದಿ |ಮುಪ್ಪಾದ ತಾಯಿ - ತಂದೆಗಳೆಲ್ಲರನು ಬಿಟ್ಟು |ಒಪ್ಪಿ ಧಾರೆಯನೆರೆದ ಕುಲಸತಿಯ ಬಿಟ್ಟು ಕಂ -ದರ್ಪನಾ ಬಲೆಗೆ ಸಿಕ್ಕಿ 19ವಿಪ್ರ ನಾನಾದರೂ ಜಗದಿ ನಿಂದ್ಯನು ಆಗಿ |ಇಪ್ಪೆ ನೀ ಪರಿಯೊಳೆನ್ನಂಥ ಪಾತಕಿಯಿಲ್ಲ |ತಪ್ಪಲಿಲ್ಲವೊ ಹಣೆಯಬರೆಹವಿದು ಭುವನದೊಳುಬೊಪ್ಪರೇ ವಿಧಿಯೆಂದನು 20ಇಳೆಯೊಳಗೆ ಶ್ರೀಪುರಂದರ ವಿಠಲನಾಮವನು |ನೆಲೆಯರಿತು ನೆನೆವರಿಗೆ ಯಮನ ಬಾಧೆಗಳಿಲ್ಲ |ಸುಲಭದಿಂದಲ್ಲಿ ಸಾಯುಜ್ಯಪದವಿಯು ಸತ್ಯಬಲುನಂಬಿ ಭಜಿಸಿ ಜನರು21
--------------
ಪುರಂದರದಾಸರು