ಶಂಕರ ಶಿವಶಂಕರ ಶಿವಶಂಕರ ಶಿವಶಂಕರ
ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ.
ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ
ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ
ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ
ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ1
ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ
ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ
ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ
ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2
ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ
ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ
ಕರುಣಾಲವಾಲ ಮಹೇಶ್ವರ
ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3
ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ
ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ
ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ
ಮೃಡ ನಮೋ„ಸ್ತು ಸುಮನನಿಯಾಮಕ 4
ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ
ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ
ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ
ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5
ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ
ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ
ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ
ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6
ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ
ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ
ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ
ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7
ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ
ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ
ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ
ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8