ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆಪ.
ಕಂಡೀಶವಿನುತ ಬ್ರಹ್ಮಾಂಡಪಾಲ ಮಾ-
ರ್ತಾಂಡಮಂಡಲಗ ಶುಂಡಾಲವರದಅ.ಪ.
ಕ್ಷೇಮದಿ ಶ್ರೀಹರಿನಾಮವ ವರ್ಣಿಸೆ
ನೇಮಾನುಷ್ಠಾನದೊಳಿರಲು
ನಾ ಮಾಡಿದ ನಾನಾವಿಧ ಪಾಪವ
ತಾಮಸಗೊಳಿಸುವ ಕಾಮಕ್ರೋಧಗಳಿಂ1
ಶಿಷ್ಟಾಚಾರದೊಳಿಷ್ಟನಾಗಿ ಪರ
ಮೇಷ್ಠಿಜನಕ ಜಯ ಜಯವೆನಲು
ಭ್ರಷ್ಟಾಲೋಚನೆ ಪುಟ್ಟಿಸಿ ಪಾಪದ
ಬಟ್ಟಿಯ ಹೊದ್ದಿಪ ದುಷ್ಟಸಂಗದಿಂ2
ನಾರಾಯಣ ನರಹರಿಯೆನ್ನುವ ವ್ಯಾ-
ಪಾರವ ನಾ ಮಾಡುತ್ತಿರಲು
ಆರೋಹಣಾವರೋಹಣ ನಾದವಿ-
ಕಾರಗೊಳಿಪ ಶಾರೀರಪ್ರಕೃತಿಯಿಂ 3
ಆರ್ಕಾರಣ ರಿಪುಗಳಿಗೈ ಸರ್ವ ದೇ-
ವರ್ಕಳ ಮಸ್ತಕಮಣಿ ನೀನೈ
ತರ್ಕಾಗಮ್ಯ ಲಕ್ಷ್ಮೀನಾರಾಯಣ
ಅರ್ಕಾಮಿತಪ್ರಭ ಕಾರ್ಕಳಪುರವರ4