ನಾಯಿ ಕಚ್ಚೀತೆಚ್ಚರಿಕೆ ಎಲೋ
ಡಾವಿಟ್ಟು ಬರುತಾದೆಚ್ಚರಿಕೆ ಪ
ನೋವು ತೀರದೀ ನಾಯಿ ಕಚ್ಚಲು
ಕೇವಲ ವಿಷವುಳ್ಳ ಹೇಯನಾಯಿ ಅ.ಪ
ಮೆಚ್ಚು ಮದ್ದಿಕ್ಕುವುದು ಅಚ್ಚರೋಗದ ನಾಯಿ
ಮುಚ್ಚುಮನೆ ಮುರಿವುದು ಲುಚ್ಚನಾಯಿ
ಸಾಚ್ಯನೆಂದು ನಂಬಿ ನೆಚ್ಚಿದವರ ಮೇಲೆ
ಕಚ್ಚಿ ಬಿಚ್ಚುವುದೊಂದ್ಹುಚ್ಚು ನಾಯಿ 1
ಸೂಳೆನ್ನ ಹೋಗುವುದು ಮೂಳನಾಯಿ
ಶೀಲ ತೊರೆವುದೊಂದು ಜೂಲುನಾಯಿ
ಕೀಳರಿಂ ತಲೆಗೂಡಿ ಹಾಳ್ಹರಟ್ಹೊಡೆವುದು
ಕೂಳ ಕಾಣದಂಥ ಹಾಳೂರನಾಯಿ 2
ಉಂಡುಂಡು ಮಲಗ್ವುದು ಸುಂಡಿನಾಯಿ
ಕಂಡಂತೆ ತಿರಗುವ ದಂಡನಾಯಿ
ಹೆಂಡ್ತಿನ್ನ ಬಿಟ್ಟು ಪರರ್ಹೆಂಡರಿಗೊಲಿವುದು
ಉಂಡೊಗೆದೆಂಜಲ ನೆಕ್ಕುವ ನಾಯಿ 3
ಬಡವರ ಬಡಿವುದು ಬಡಕನಾಯಿ
ಕಡುಗರ್ವದಿರುವುದು ತುಡುಗ ನಾಯಿ
ದೃಢಯುತರನು ಕಂಡು ಬಿಡುನುಡಿಯಾಡ್ವುದು
ಸುಡುಗಾಡೋಳ್ಬಿದ್ದಸ್ತಿ ಕಡಿಯುವ ನಾಯಿ 4
ವಿಚಾರನರಿಯದ್ದು ಬೇಬಿಟ್ಟಿನಾಯಿ
ಅಚಾರಮನವಿಲ್ಲದ್ಹರಕುನಾಯಿ
ಊಚಸ್ಥಾನದಿ ಕೂತು ನಾಚದೆ ಮೋರಿಚ್ಛೆ
ವಾಚ ಪೇಳ್ವುದೊಂದು ನೀಚನಾಯಿ 5
ಆಸೆ ಪೇಳುವುದೊಂದು ಮೋಸದ ನಾಯಿ
ಶಾಶ್ವತ ತಿಳಿಯದ್ದು ಪಾಶದ ನಾಯಿ
ಈಶನ ದಾಸರ ದೂಷಿಪುದು ಹೊಲೆ
ದಾಸರಮನೆಮುಂದಿನ್ಹೇಸಿನಾಯಿ6
ಕೋಪವ ತೊರೆಯದ್ದು ತಿರುಕನಾಯಿ
ಪಾಪಕ್ಕೆ ಅಂಜದ್ದೀ ನರಕಿನಾಯಿ
ಭೂಪ ಶ್ರೀರಾಮನ ಜ್ಞಾಪಕಕೆ ತರುವೆನು
ಕೂಪದಿ ಉರುಳುವ ಪಾಪಿನಾಯಿ 7