ಬಂದಳು ಭಾಗ್ಯನಿಧಿ ಶ್ರೀಧರನರಸಿ ಪ.
ಪೊಂದಿದ ಭಕ್ತರಾನಂದದ ಸ್ತುತಿಗಾ
ನಂದ ಪಡುತ ಒಂದೊಂದ್ಹೆಜ್ಜೆನಿಡುತಾ ಅ.ಪ.
ಕಡಗ ಕಂಕಣ ತೋಳ್ಬಂದಿಯ ಧರಿಶಿ
ಬಡನಡು ಬಳುಕುತ ದೃಢಭಕ್ತರೆಡೆಗೆ 1
ಹೆರಳು ಬಂಗಾರದ ಶಿರದ ಮಲ್ಲಿಗೆ ಮುಡಿ
ಸರಸದಿಲುದರುತ ವರಪ್ರದ ಮಾತೆ 2
ವರದ ಶ್ರೀ ಶ್ರೀನಿವಾಸ ಸ್ವರ ರಮಣಿಯು ತಾ
ಥರಥರದ್ವರಗಳ ಕರುಣಿಸಲೆಮಗೆ 3