ಎಲ್ಲಿ ನೋಡಿದರಲ್ಲಿ ಚನ್ನಕೇಶವನು
ಪುಲ್ಲಲೋಚನನಾದ ಶ್ರೀ ಕೃಷ್ಣನು ಪ
ಭೂತಳ ಪಾತಾಳ ಸಕಲ ಲೋಕಗಳಲ್ಲಿ
ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ
ಮಾತು ಚೇಷ್ಟಗಳಲ್ಲಿ ಕೆರೆ ಭಾವಿ ವನದಲ್ಲಿ
ಕೋತಿ ಖಗವೃಂದ ಪಶುವರ್ಗಂಗಳಲ್ಲಿ 1
ವೇದ ಶಾಸ್ತ್ರಗಳಲ್ಲಿ ಸರ್ವ ಧರ್ಮಗಳಲ್ಲಿ
ಬೋಧಕ ಮೊದಲಾದ ಗುರು ವರ್ಗದಲ್ಲಿ
ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ
ವಾದ್ಯ ಮೃದಂಗಾಗಿ ನಾದಂಗಳಲ್ಲಿ 2
ಕಣ್ಣುಗಳಿಗೆಸೆಯುವ ಸಕಲ ವಸ್ತುಗಳಲ್ಲಿ
ಮಣ್ಣಿನಲಿ ಸರ್ವತ್ರ ಘನ ಸೃಷ್ಟಿಯಲ್ಲಿ
ಬಣ್ಣಿಸಲ್ಕಾಗದ ಹರಿ ಕೀರ್ತನೆಗಳಲ್ಲಿ
ಹೆಣ್ಣು ಹೊನ್ನು ಮಣ್ಣು ತ್ರಿವರ್ಗದಲ್ಲಿ 3
ಸಕಲ ಚರ ಪ್ರಾಣಿಯಲಿ ಅಚರ ಜೀವಗಳಲ್ಲಿ
ಸಕಲ ಸ್ತ್ರೀ ಪುರುಷರಲಿ ಸುರದನುಜರಲ್ಲಿ
ಸಕಲ ಧಾನ್ಯಗಳಲಿ ತಿಂಡಿ ತಿನಸುಗಳಲ್ಲಿ
ಸುಖ ದುಃಖ ಬಹಿರಂಗ ಅಂತರಂಗದಲಿ 4
ದಿನದಲ್ಲಿ ನಿಶೆಯಲ್ಲಿ ಅನ್ನಪಾನಗಳಲ್ಲಿ
ಅಣುರೇಣು ತೃಣಕಾಷ್ಟ ಸರ್ವ ದಿಕ್ಕಿನಲೀ
ಕನಸಿನಲಿ ಮನಸಿನಲಿ ಪಂಚ ಭೂತಗಳಲ್ಲಿ
ಜನನ ಮರಣಾತೀತ ಚನ್ನಕೇಶವನು 5