ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ದೋಷನಾಶ ಜಗದೀಶ ಈಶ ಕೈ ಲಾಸವಾಸ ಸದಾನಂದ ಹರ ಜೈಜೈ ಪರಮಾನಂದ ಪ ದಂಡಧರನೆ ಹರ ರುಂಡಮಾಲ ರುದ್ರ ಕೆಂಡನಯನ ಸದಾನಂದ ಹರ ಜೈ ಜೈ ಪರಮಾನಂದ1 ಗೌರಿನಾಥ ಪ್ರಭು ಮಾರಮರ್ದನ ಮೃಡ ವಾರಿಧಿಧರ ಸದಾನಂದ ಹರ ಜೈ ಜೈ ಪರಮಾನಂದ 2 ಅಗಜಾವಲ್ಲಭ ನಿಗಮವಂದ್ಯ ಭಕ್ತ ರಘನಾಶನ ಸದಾನಂದ ಹರ ಜೈ ಜೈ ಪರಮಾನಂದ 3 ಗಜಚರ್ಮಾಂಬರ ಸುಜನರ ಪರಿಪಾಲ ತ್ರಿಜಗಪೂಜ್ಯ ಸದಾನಂದ ಹರ ಜೈ ಜೈ ಪರಮಾನಂದ 4 ತ್ರಿಪುರಸಂಹರ ನುತ ಸುಫಲದಾಯಕ ಮಹ ಕೃಪಾಕರ ಶಿವ ಸದಾನಂದ ಹರ ಜೈ ಜೈ ಪರಮಾನಂದ 5 ನೀಲಕಂಠ ಭವಮಾಲನಿವಾರ ತ್ರಿ ಶೂಲಧಾರಿ ಸದಾನಂದ ಹರ ಜೈ ಜೈ ಪರಮಾನಂದ 6 ಚಂದ್ರಚೂಡ ಶರಣೇಂದ್ರ ಮೃಕಂಡುಮುನಿ ಕಂದಗೊಲಿದ ಸದಾನಂದ ಹರ ಜೈ ಜೈ ಪರಮಾನಂದ 7 ಫಾಲನಯನ ಸುಖದಾಲಯ ನುತಜನ ಮೇಲುಮಂದಿರ ಸದಾನಂದ ಹರ ಜೈ ಜೈ ಪರಮಾನಂದ 8 ಭವ ಭೂತಿಖ್ಯಾತ ಜಗ ದಾತ ಸದಾನಂದ ಹರ ಜೈಜೈ ಪರಮಾನಂದ 9 ನಾದತೀತ ಅಮರಾದಿವಿನುತ ಮಹ ದಾದಿದೇವ ಸದಾನಂದ ಹರ ಜೈ ಜೈ ಪರಮಾನಂದ 10 ನತಜನ ಸುಖದಾಶ್ರಿತ ಹಿತಮತಿ ದೇ ನುತಿಪೆ ಸತತ ಸದಾನಂದ ಹರ ಜೈಜೈ ಪರಮಾನಂದ 11 ಭಾಗವತರ ಪ್ರಿಯ ಭಗವತ್ಶಿಖಾಮಣಿ ನಾಗಭೂಷ ಸದಾನಂದ ಹರ ಜೈ ಜೈ ಪರಮಾನಂದ 12 ಖೊಟ್ಟಿಲೋಹ ಸುಟ್ಟು ಕಿಟ್ಟತೆಗೆವಂತೆನ್ನ ಭ್ರಷ್ಟತ್ವಕಳಿ ಸದಾನಂದ ಹರ ಜೈ ಜೈ ಪರಮಾನಂದ 13 ಹರಣಪೋದರು ಹರಿಚರಣಸ್ಮರಣೆಬಿಡ ದ್ವರವ ಪಾಲಿಸು ಸದಾನಂದ ಹರ ಜೈ ಜೈ ಪರಮಾನಂದ 14 ಲಿಂಗಪುರೇಶ ಶಿವಲಿಂಗರೂಪ ಭವ ಭಂಗಸಂಗ ಸದಾನಂದ ಹರ ಜೈ ಜೈ ಪರಮಾನಂದ 15 ಮಂದರಧರನಡಿ ಚಂದದೊಲಿಸಿ ಎನಗಾ ನಂದಕೊಡು ಸದಾನಂದ ಹರ ಜೈ ಜೈ ಪರಮಾನಂದ 16 ಮಂಗಳಮೂರುತಿ ತುಂಗವಿಕ್ರಮ ಶ್ರೀ ರಂಗ ರಾಮ ಭಕ್ತಾನಂದ ಹರ ಜೈ ಜೈ ಪರಮಾನಂದ 17
--------------
ರಾಮದಾಸರು