ಹರಕೆಯ ಮಾಡಿಕೊಳ್ಳೀ ಕೇಶವನಿಗೆ
ಹರಕೆಯ ಕಟ್ಟಿಕೊಳ್ಳೀ ಪ
ಹರಕೆಯ ತೀರಿಸಿಷ್ಟಾರ್ಥವ ಪಡಕೊಳ್ಳೀ
ಹರುಷದಿ ಹರಿಗಾತ್ಮವರ್ಪಿಸಿಕೊಳ್ಳೀ ಅ.ಪ.
ಭಜನೆಯ ಮಾಳ್ಪೆನೆಂದೂ ಕೇಶವನಿಗೆ
ಭಜನೆಯರ್ಪಿಸುವೆನೆಂದೂ
ಅಜಪಿತ ಶ್ರೀಹರಿದಾತನಾಗಿರುವಾಗ
ಭಜಕರು ಕೊಡುವ ಭೋಜನ ಭಕ್ಷವ್ಯಾಕೇ 1
ಸ್ಮರಣೆಯ ಮಾಳ್ಪೆನೆಂದು ಕೇಶವನಿಗೆ
ಸ್ಮರಣೆಯರ್ಪಿಸುವೆನೆಂದೂ
ನಿತ್ಯ ತೃಪ್ತನುಯಿರೆ
ಬರಿದೆ ನೈವೇದ್ಯವ ಸಲಿಸುವುದ್ಯಾಕೇ 2
ಸೇವೆಯ ಮಾಳ್ಪೆನೆಂದು ಕೇಶವನಿಗೆ
ಸೇವೆಯರ್ಪಿಸುವೆನೆಂದೂ
ಭಾವಜನಯ್ಯನೆ ತ್ರಿಜಗಪಾಲಕನಾಗಿ
ದೇವತಾನಿರುತಿರೆ ಭವಭಯವ್ಯಾಕೇ 3
ವಂದನೆ ಮಾಳ್ಪೆನೆಂದು ಕೇಶವನಿಗೆ
ವಂದನೆ ಕೊಡುವೆನೆಂದೂ
ಚಂದದಿ ಹರಿತಾನೇ ಸೃಷ್ಟಿಗೀಶನುಯಿರೆ
ಅಂದದಿ ಕೊಡುವ ದಾನಗಳವಾಗ್ಯಾಕೇ 4
ಆತ್ಮವ ಕೊಡುವೆನೆಂದೂ ಕೇಶವನಿಗೆ
ಅತ್ಮವರ್ಪಿಸುವೆನೆಂದೂ
ಸಾತ್ವಿಕ ಜನವಂದ್ಯ ದೂರ್ವಾಪುರದೊಳಿರೆ ಮತ್ಯಾಕೆ ಯೋಚನೆ ಭಕ್ತಿಯುಳ್ಳವಗೇ 5