ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ
ತ್ರಾಹಿ ತಾರಕಬ್ರಹ್ಮ ಸಾಯೋಜ್ಯತ
ತ್ರಾಹಿ ಅನಾಥ ಬಂಧು ಸಾಕ್ಷಾತ
ತ್ರಾಹಿ ದೀನಾನಾಥ ತ್ರಾಹಿ ತ್ರಾಹಿ 1
ಮಾಡಲರಿಯೆ ನಾನಿಮ್ಮ ನಿಜಸ್ತುತಿ
ಹಿಡಿಯಲರಿಯೆ ದೃಢ ಸದ್ಭಕ್ತಿ
ಪೊಡವಿಯೊಳು ನಾ ಮೂಢಮಂದಮತಿ
ಕೂಡಿಕೊಂಬೊ ದಯಮಾಡೋ ಶ್ರೀಪತಿ 2
ಮೊದಲಿಗಾಡುವ ಬಾಲಕವೃತ್ತಿ
ತೊದಲುನುಡಿ ತಾಯಿಗತಿ ಪ್ರೀತಿ
ಇದೆ ಪರಿಯಲೊಪ್ಪಿಸಿಕೊಂಬ ಸ್ತುತಿ
ಮೇದಿನಿಯೊಳು ನಿಮ್ಮ ಖ್ಯಾತಿ 3
ಆಡಿಸಿದಂತೆ ಆಡುವೆ ನಾ ನುಡಿ
ನಡೆಸಿಕೊಂಬುದು ಸನ್ಮತ ಮಾಡಿ
ಕೊಡುವಂತೆ ಮಾನ್ಯ ಸಂತರೊಡಗುಡಿ
ಮಾಡೊ ದಯ ನಿಮ್ಮಭಯನೀಡಿ 4
ತ್ರಾಹಿ ತ್ರಾಹಿಯೆಂಬೆ ತನು ಮನರ್ಪಿಸಿ
ತ್ರಾಹಿಯೆಂಬೆ ಶಿರಸಾಷ್ಟಾಂಗ ನಮಿಸಿ
ಕಾಯೊ ಮಹಿಪತಿಯ ಕರುಣಿಸಿ 5