ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ ಭೋಗ ನರಸಿಂಹಸ್ವಾಮಿ ಪ. ನಾಗಶಯನನೆ ದೇವ ಕರಿಗಿರಿ ನಿಲಯ ಹರಿ ಯೋಗಿ ಶ್ರೀಗುರು ಹೃದಯ ನಿಲಯ ಅ.ಪ. ಸಿರಿಯನ್ನೆ ತೊಡೆಯ ಮೇಲೆರಿಸಿಕೊಂಡು ನಗುತ ಪರಿಪರೀ ಸೇವೆಯನು ಭಕ್ತರಿಂ ಕೊಳುತ ಪರಮಾತ್ಮ ಪಂಚಾಮೃತದ ಅಭಿಷೇಕವನು ಎರೆಯುತಿರೆ ಕಂಡು ನಾ ಹರುಷಪಟ್ಟೆನೊ ಸ್ವಾಮಿ 1 ಸುರನದಿಯ ಜಲ ತಂದು ನಿನಗಭಿಷೇಕವನೆ ಎರೆದು ಪರಿಪರಿಯ ಪೂಜೆ ಅಲಂಕಾರವನೆ ಮಾಡಿ ತರತರದ ಷಡ್ರಸವ ಭೋಜನವಗೈಸುತಲಿ ವರ ಮಂಗಳಾರತಿಯನೆತ್ತಿದುದ ಕಂಡೆ 2 ಘನ್ನ ಮಹಿಮೆನೆ ಸ್ವಾಮಿ ಎನ್ನ ಬಿನ್ನಪ ಕೇಳಿ ಮನ್ನಿಸಿ ದರುಶನವ ಇನ್ನು ಕರುಣಿಸಿದೆ ನಿನ್ನ ಸಮರಿನ್ಯಾರೊ ಪನ್ನಗಶಯನನೆ ಧನ್ಯರೋ ನಿನ್ನ ಪದವ ನಂಬಿದವರು3 ಶಾಂತರೂಪವ ಧರಿಸಿ ಶಾಂತ ಮೂರುತಿ ಎನಿಸಿ ಅಂತರಂಗದಿ ನಿನ್ನ ಧ್ಯಾನಿಸುವರ ಸಂತೋಷಪಡಿಸುತಲಿ ಕಾಯ್ವ ಕಮಲಾಕಾಂತ ಅಂತರಂಗವ ತಿಳಿದು ಸಂತೈಸೊ ಎನ್ನ 4 ಪಾಪಿ ದೈತ್ಯನ ಕೊಂದು ಕೋಪಿಸದೆ ಭಕ್ತನೊಳು ಕಾಪಾಡಿದೆಯೊ ಪರಮಪ್ರೇಮದಿಂದ ಗೋಪಾಲಕೃಷ್ಣವಿಠ್ಠಲನೆ ಅದರಂದದಲಿ ಕಾಪಾಡೊ ಭಕ್ತರನು ಹೃದಯದಲಿ ನೆಲಸಿ 5
--------------
ಅಂಬಾಬಾಯಿ
ಮುರುಳಿಯ ನೂದಿದನಾಗ ಹರಿ ವಿಧವಿಧರಾಗದೊಳೀಗ ಪ ತುರುಗಳ ಕಾಯುತ ತರಳರ ಒಡಗೂಡಿ ಸುರಮುನಿವಂದಿತ ಸರಸಿಜನಾಭನು ಅ.ಪ ಚಂದದ ಪಾಡಗರುಳಿಯು ಕಾ- ಲಂದುಗೆ ಕಿರುಗೆಜ್ಜೆ ಧ್ವನಿಯು ಹಿಂಡುಗೋವ್ಗಳ ವೃಂದದಿ ನಲಿಯುತ ಮಂದರೋದ್ಧರ ಗೋವಿಂದ ಮುಕುಂದನು1 ಉಟ್ಟ ಪೀತಾಂಬರ ಹೊಳೆಯೆ ನಡು ಕಟ್ಟಿದ ಚಲ್ಲಣ ಹೊಳೆಯೆ ಪರಮೇಷ್ಟಿ ಪಿತನು ತನ್ನ ಪುಟ್ಟ ಕರದಲಿ ಉತ್ತಮನಾದದ 2 ವಿಧವಿಧಹಾರಗಳಿಂದ ರನ್ನ ಪದಕದ ಮುತ್ತುಗಳಿಂದ ಹೃದಯದಿ ಶ್ರೀ ಭೂ ಸಹಿತದಿ ಮೆರೆಯಲು ಪದುಮನಾಭ ಶ್ರೀ ಚಲ್ವ ಮದನಗೋಪಾಲನು 3 ಕೋಟಿಸೂರ್ಯರಂದದಲಿ ಬಹು ಮಾಟದ ಮುಖಕಾಂತಿಯಲಿ ನೋಟದಿ ಜಗವನೆ ಮೋಹವಗೊಳಿಪ ಕಿರೀಟಿಯ ಪೊರೆದ ವೈರಾಟನು ಹರುಷದಿ 4 ಕರ್ಣದಿ ಬಾವುಲಿ ಹೊಳಪು ನವ- ರನ್ನ ಕಿರೀಟದ ಬೆಳಕು ಕನ್ನಡಿಯಂದದಿ ಕದುಪಿನ ಝಳಪು ಮೋ- ಹನ್ನ ಮಾಲೆನಿಟ್ಟ ಸೊಗಸಿನ ವಲಪು 5 ಮುಖದಲಿ ಮುಂಗುರುಳೊಲಿಯೆ ಪ್ರಿಯ ಸಖಿಯರು ಹರುಷದಿ ನಲಿಯೆ ಅಕಳಂಕ ಮಹಿಮನು ಗುಪಿತದಿ ಗೆಳೆಯರ ಸುಖವ ಪಡಿಸುತಲಿ ಸಖ್ಯದಿಂದ ಪ್ರಿಯನು 6 ತುರು ವೃಂದದಲಿ ಗೋ- ವಿಂದನು ಕುಣಿಕುಣಿಯುತಲಿ ಅಂಬರದಲಿ ದೇವದುಂದುಭಿ ಮೊಳಗಲು ಕಂಬು ಕಂಧರ ಹರಿ ಸಂಭ್ರಮ ಸೂಸುತ 7 ವಾಸವ ವಂದಿತ ಹರಿಯೆ ಸರ್ವೇಶ ಕೃಪಾಕರ ದೊರೆಯೆ ವಾಸುದೇವ ಸರ್ವೇಶನೆ ಭಕುತರ ಸಾಸಿರನಾಮದಿ ತೋಷಪಡಿಸುತಲಿ 8 ಪಾಹಿ ಪಾಹಿ ಶ್ರೀಶ ನಮೋ ಪಾಹಿ ಪಾಹಿ ಬ್ರಹ್ಮೇಶ ಪಾಹಿ ಪಾಹಿ ಪರಿಪಾಲಿಸು ನಮ್ಮನುಪಾಹಿ ಕಮಲನಾಭವಿಠ್ಠಲ ದಯಾನಿಧೆ 9
--------------
ನಿಡಗುರುಕಿ ಜೀವೂಬಾಯಿ