ದು:ಖರೂಪಿನ ರೊಕ್ಕ ದಕ್ಕಗೊಡದಖಿಲರನು
ತಿಕ್ಕಾಡುತಿಹ್ಯದಕಟ ಒಕ್ಕಲಿಕ್ಕಿ ಬಿಡದೆ ಪ
ಇದ್ದರುಣಗೊಡದಿಲ್ಲದಿದ್ದರು ಸುಖಕೊಡದು
ಶುದ್ಧಪದ್ಧತಿಯವರರ ಬದ್ಧರೆನಿಸುವುದು 1
ಮರಿಯಾದೆ ತಗಿತಿಹ್ಯದು ಮರಿಯಾದೆಲಿರಗೊಡದು
ಜರಜರಕೆ ನರರಿಗೆ ಶಿರವ ಬಾಗಿಸುವುದು 2
ಸತಿಸುತರ ತರಿಸುವುದು ಹಿತದಿಂದ ಇರಗೊಡದು
ಮತಿಗೆಡಿಸಿ ಸತತ ದುರ್ಗತಿಗೆ ಎಳಸುವುದು 3
ವಂದನೆಯ ಕೊಡಿಸುವುದು ಕುಂದು ನಿಂದ್ಹೊರಿಸುವುದು
ಒಂದುಸ್ಥಿರಮಿಲ್ಲದರ ಅಂದಮೇನಿಹ್ಯದು 4
ಕಲ್ಪಿಸಿದರಾರಿದನು ಅಲ್ಪಮತಿಯಿಂ ಬಯಸಿ
ಕಲ್ಪತರುಶ್ರೀರಾಮನಾಲ್ಪರಿದು ಒಲಿಸಿ 5