ತಗಲಿ ತಗಲದೆ ಈ ಜಗದೊಳು ಜೀವಿಸೊ
ಕಮಲ ಪತ್ರದಲ್ಲಿಹ ಜಲದ ಕಣಗಳಂತೆ ಪ
ತಗಲುತ ನಿರತ ಸುಖವನೀವ ಕರ್ಮಕ್ಕೆ
ತಗಲದೆ ಭವದಲಿ ಬಿಗಿವ ವಿಷಯಗಳಿಗೆ ಅ.ಪ
ಪರಿಪರಿ ಕ್ಷಣಿಕ ಸುಖದ ಮೋಹದೊಳತಿ
ದುರಿತಗಳಿಗೆಳೆವ ದುರುಳರ ಅಗಲೆಲೋ
ಹರಿದಾಸರ ಸಹವಾಸಕ್ಕೆ ತಗಲುತ್ತ
ಹರಿಗುಣ ಪೊಗಳುವ ಪರಮ ಸುಖವ ಬಯಸೊ 1
ಸತಿ ಸುತರೆಲ್ಲ ಶ್ರೀಪತಿಯ ಸೇವೆಯೊಳತಿ
ಹಿತ ತೋರಲು ಅವರೊಳಾಮತಿಯನು ತಗಲಿಸೊ
ಕ್ಷಿತಿಯೊಳವರು ನಿನ್ನ ಭೋಗವಸ್ತುಗಳೆಂದು
ಮಿತಿ ಮೀರಿರುವ ಮಮತೆಗೆ ತಗಲದಿರೊ 2
ದುರ್ಮಾರ್ಗದೊಳು ದುಷ್ಟಕರ್ಮಗಳನೆ ಮಾಡಿ
ಹೆಮ್ಮೆಯಿಂದಲಿ ಪಾಪ ಫಲಗಳ ಬಯಸದೆ
ಧರ್ಮದಿ ಸುಖಗಳನನುಭವಿಸುವುದಕೆ
ಸಮ್ಮತಿ ಈ ಯುವ ನಮ್ಮ ಪ್ರಸನ್ನನು 3