ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1 ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2 ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು ದಡದಡನೆ ಬಂದೆಯೊ ಮಡದಿಗ್ಹೇಳದಲೆ 3 ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4 ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ ಅಂದು ಇಹಸುಖದಿ ಆನಂದ ಪಡುತಿರಲು ಬಂದರಾಗ ಯಮಭಟರು ನಿಂದು ಬಾಧಿಸುತಿರಲು ಕಂದನಾರಗನೆನಲು ಅಂದು ಸಲಹಿದೆಯೊ 5 ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು ತಕ್ಕವರಗಳನಿತ್ತು ತಕ್ಕೈಸಿ ಅಣುಗನನು ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6 ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ ಶ್ರೀಪತಿಯ ರಕ್ಷಿಸಿದಿ ಆಪನ್ನಜನರ ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7 ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ ಕಾಳದೇವಿಯರಮಣ ಕಾಲಿಗೆರುಗುವೆನು ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ ಭಾಳ ಸುಖಹರುಷಗಳ ಲೀಲೆ ತೋರಿಸುವ 8 ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ ಕಮಲಸಂಭವಜನಕ ಕಮಲನಾಭ ವಿಠ್ಠಲ ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
--------------
ನಿಡಗುರುಕಿ ಜೀವೂಬಾಯಿ