ಕಂಡೆನೋ ಕಂಡೆ ಗುರುಚಿದಂಬರನಾ ತನು
ಗೊಂಡು ಭೂಮಂಡಲದೊಳು ಚರಿಸುವನಾ ಪ
ಪರಮಾತ್ಮ ಪರತತ್ವವನು ತಿಳಿದವನ
ಧರೆಯ ಜನರನÀು ಪಾವನವ ಮಾಡುವನಾ
ಕರುಣ ಸಮುದ್ರ ದೀನರ ದಯಾಪರನಾ
ನೆರೆನಂಬಿದವರಿಗೆ ವರವ ಕೊಡುವನಾ 1
ಮಳೆ ಛಳಿ ಬಿಸಿಲು ಹಸಿವಿಗಂಜದವನ
ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ
ನೆಲೆಗಾಣದಂತಹ ಅಪಾರ ಮಹಿಮನು
ಕಲಿಮನದೊಡ್ಡದಾನಂದ ನಿರ್ಗುಣನ 2
ಸ್ಮರಹರನಂತೆ ಭಸಿತ ದಿಗಂಬರನಾ
ಕೆರೆಬಾವಿ ದೇವಾಲಯವನು ಕಟ್ಟಿಸುವನ
ಪುರಹರನಂತೆ ಢಿಕ್ಕನೆ ಧರಿಸಿಹನ
ನರ ಗುರಿಗಳು ಬಲ್ಲರೇನೋ ಇಂಥವನಾ 3
ಯಮನಿಯಮ ಅಷ್ಟಾಂಗ ನಿರತನ
ಕಮಲಾರಿ ಪಿತನಂತೆ ಗಂಭೀರದವನ
ಹಿಮವಂತನಂತೆ ಧೈರ್ಯದೊಳಿರುತಿಹನ
ಕಮಲ ಬಾಂಧವನಂತೆ ತೇಜದಿಂದಿರುತಿಹನ 4
ಅರಿಗಳನರುವರ ನುಗ್ಗೊತ್ತಿದವನ
ಕರಣೇಂದ್ರಿಯಂಗಳ ನಿಗ್ರಹಿಸಿದವನ
ಪರಮ ದಾಸಗೆ ಆಲಿಂಗನವನಿತ್ತನಾ
ಸ್ಥಿರ ಚಿದಾನಂದ ಪುರದ ದಿಗಂಬರನ 5