ಒಟ್ಟು 10 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲೇನಿಲ್ಲೇನು ಮತ್ತಿಲ್ಲೇನು ಪ ಅಲ್ಲೇ ನಿಲ್ಲೇನು | ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು 1 ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು| ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು 2 ಅಲ್ಲೇನಿಲ್ಲೇನು | ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು 3 ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು | ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು 4 ಅಲ್ಲೇ ನಿಲ್ಲೇನು | ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು 5 ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು | ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾದರೇನು ಪ ತನು ವೈರಾಗ್ಯದಲ್ಲಿಟ್ಟನವರತಾ | ಅಣಿಮಾ ಸಿದ್ಧಿ ಅರತಾ | ಘನಗುರು ಜ್ಞಾನವಾ ಮರತು 1 ಓದಿಕಿಯಲಿ ನಿಪುಣಾದವನು ಯಲ್ಲಾ | ವೇದಾರ್ಥ ಮಾಡಬಲ್ಲಾ ಸಾಧುರಾ ಮಾರ್ಗವೆ ತಿಳಿಲಿಲ್ಲಾ 2 ಗುರು ಮಹಿಪತಿ ಸುತ ಪ್ರಭುವಲಿಯದೆ | ಪರಗತಿ ಸಾಧಿಸುವದೆ | ಬರೆ ವ್ಯರ್ಥಡಂಭದಿ ಮೆರೆವುದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೂ ಸಾರ್ಥಕವಿಲ್ಲವೋ ಪ ಏನೂ ಸಾರ್ಥಕವಿಲ್ಲ ಜ್ಞಾನಮಾರ್ಗಗಳಿಲ್ಲ ಮಾನಸ ಸ್ಥಿರವಿಲ್ಲ ಶ್ರೀನಾಥನಿದಬಲ್ಲ ಅ.ಪ ಎರಡುಕಂಬದ ಮೇಲೆ ಇರುವ ಪಂಜರವಿದು ಬರಿಯಡಂಭದ ಜಗವು ಸ್ಥಿರವೆಂಬ ತನುವಿನೊಳು 1 ತೈಲವಿಲ್ಲದ ದೀಪ ಮಲಿನವಾಗುವ ತೆರದಿ ಸುಲಭದೊಳಿಹ ಪ್ರಾಣ ತೊಲಗಿದ ಬಳಿಕಿನ್ನು 2 ಸಂತೆಗೈದಿದ ಜನದಂತೆ ಪಂಚೇಂದ್ರಿಯವ ನಾಂತ ದೇಹವು ವ್ಯರ್ಥ ಅಂತರಾತ್ಮನು ಹೋಗೆ 3 ರಸನೆ ತೊದಲುವ ಮೊದಲು ಅಸುವು ಪೋಗುವ ಮೊದಲು ಅಸುರಾರಿ ಎಂಬ ಮಧುವ ರಸನೆಯೊಳಿಡೋ ಮನುಜ4 ದಿನದಿನ ಹರಿಕೃಷ್ಣ ವನಮಾಲಿಯ ನುತಿಸೋ ತನುವ ಪ್ರಾಣವ ಬಿಡುವ ದಿನವನರಿಯೆ ನೀನು 5 ದೇವದೇವನೆ ನಿನ್ನ ಸೇವಕನೆಂದೆನ್ನ ಭಾವಿಸೋ ಮದನಾಂಗ ಮಾವಿನಕೆರೆರಂಗ6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಪವ ಮಾಡಿದರೇನು ತಪವ ಮಾಡಿದರೇನು ವಿಪುಲಭಕ್ತಿಯು ಮಾತ್ರ ಇಲ್ಲದಿರುವವನು ಪ ವಿಪರೀತ ಡಂಭದಲಿ ಉಪಕರಣಗಳ ತೊಳೆದು ಕೃಪೆ ಪಡೆಯದಿರೆ ಗುರು ರಾಘವೇಂದ್ರನ ಅ.ಪ ಗುರುವಿನುಪದೇಶದ ಸ್ಮರಣೆಯನು ಮರೆತವನು ಗುರುಪಾದ ಸೇವೆಯನು ತೊರೆದು ಕಿರಿದೆನ್ನುವನು ಹರಿಯನೇ ನಾ ಕಂಡೆ ಗುರುಹಂಗು ಎನಗಿಲ್ಲ ಸರಿಯಾರು ತನಗೆಂಬ ಗರುವಯುತನು1 ಗುರುವಿನೊಲವೇ ಧರ್ಮ ಗುರುಸೇವೆಯೇ ತಪ ಗುರುನಾಮವೇ ಮಂತ್ರ ಗುರುಸಿದ್ಧಿಯೇ ತಂತ್ರ ಗುರುವೇ ಸ್ವರ್ಗಕೆ ದಾರಿ ಗುರುರೂಪ [ಕಣ್‍ಸಿರಿಯು] ಗುರುವೇ ಸರ್ವಸ್ವ ಮಾಂಗಿರಿರಂಗನುಸಿರು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಾಸರಾದವರೆಲ್ಲರು ವ್ಯಾಸರಾಯರನ್ನ ಪಾಡಿ ಪ ಡಿಂಭ ಪ್ರಲ್ಹಾದನೆನಿಸಿ ಕಂಭ ಜಾತನ ಆಯಾ ಪಿಡಿದಾ ಡಂಭದಯ್ಯನ ಸುವಾನರಸಿ ಕಂಭಣಿಯೊಳ್ ಖ್ಯಾತನಾದಾ 1 ಯತಿವರ ವ್ಯಾಸನೆನಿಸಿ ಕ್ಷಿತಿಪತಿ ಕೃಷ್ಣನ ಪಿಡಿದಾ ಚ್ಯುತಿಗಳೆಲ್ಲವನಳಿಸಿ ಶೃತಿ ಸ್ಮøತಿ ಸ್ವಾದವ ಪೇಳ್ದಾ 2 ಗುರು ರಾಘವೇಂದ್ರನೆನಿಸಿ ನರಹರಿ ಪೂಜೆಯ ಗೈದಾ ದುರಿತಕಾನನ ದುರಿತಾನೆನಿಸಿ ನರಸಿಂಹವಿಠಲನ ನೆನೆದಾ 3
--------------
ನರಸಿಂಹವಿಠಲರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ 1 ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ ಈಶನನ್ನು ಮರೆವ ನರನನು ಜಗದೀಶನರಿಯನೆ 2 ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ ಸರಳತನದಿ ದಾನ ಮಾಡಲು ನರಹರಿಯು ಅರಿಯನೆ3 ಒಡಲು ಪೊರೆಯೆ ಸಡಗರದಲಿ ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ4 ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು 5
--------------
ವಿದ್ಯಾಪ್ರಸನ್ನತೀರ್ಥರು
ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ ಯಾರಯ್ಯ ಬಾಗಿಲ ಹೊರಗೆ ನಿಂತಿರುವನು ಜಾರ ಪುರುಷನಂತೆ ತೋರುವೆ ನೀನು ಅ.ಪ ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ ಕಾರ ಧರಿಸಿರುವ ಹರಿಯಲೆ ಭಾಮೆ ಮೀನನಾದರೇ ಬಲು ಮೌನದಲಿರದಂತೆ ಮಾನವರಂತೆ ಮಾತು ಯಾವುದೋ ನಿನಗೆ 1 ಮಂದರಗಿರಿಯ ಬೆನ್ನಿಂದ ಧರಿಸಿರುವ ಅಂದ ಕೂರ್ಮನಲ್ಲವೇನೆ ಭಾಮೆ ಕೂರ್ಮ ನೀನಾದರೆ ಕೂಪದೊಳಿರುವುದೆ ಧರ್ಮವೆಂಬುವುದನು ಮರೆತೆಯಾ ನೀನು 2 ನೀಲವೇಣಿಯೆ ಕೇಳೆ ಕೋಲರೂಪದಿ ಬಂದು ಕ್ಷಿತಿ ತಂದೆನೆ ಭಾಮೆ ಪೋತರೂಪನೇ ನಿಜ ಧಾತ್ರಿಯ ಭೇದಿಸಿ ಗಾತ್ರ ರಕ್ಷಣೆ ಮಾಡು ಹೋಗೆಲೊ 3 ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು ಜಂಭದಿ ಖಳನನು ಕೊಂದೆನೇ ಭಾಮೆ ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ ಡಂಭದಿ ಬಾಗಿಲು ಭೇದಿಸಿ ಬಾರೊ 4 ವಾಮನನೆಂದು ವಟುರೂಪದಿ ಬಂದು ಸಾರ್ವ ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ ವಟುರೂಪನಾದರೆ ಕುಟಿಲಾಕ್ಷಿಯರಲಿಂಥ ಚಾಟುವಚನಗಳು ಯಾಕೆಲೊ 5 ದುರುಳನೃಪರ ಪರಿಹರಿಸಿದ ಭೃಗುಮುನಿ ವರಕುಲಜಾತ ಶ್ರೀ ರಾಮನೇ ಭಾಮೆ ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು ವನಿತೆಯರಲ್ಲಿಂಥಾ ಸರಸವೆ ನಿನಗೆ 6 ದಶರಥ ನೃಪತಿಯ ಮನೆಯೊಳವತರಿಸಿ ದಶಶಿರರನು ಕೊಂದ ರಾಮನೆ ಭಾಮೆ ಪರ ಕಾಮಿನಿಯರೊಳಿಂಥಾ ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7 ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ ಸಿರಿ ಕೃಷ್ಣನೇ ಭಾಮೆ ಚೋರನಾದ ಮೇಲೆ ಸೇರಿಸುವುದು ಹೇಗೆ ಭಾರಿ ಆಭರಣಗಳಿರುವುವೊ 8 ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ ಶುದ್ಧನಾದ ಬುದ್ಧರೂಪನೆ ಬುದ್ಧರೂಪನೆ ನಿನ್ನ ನಡತೆಯ ಕೇಳಲು ಶುದ್ಧಿಯು ಲೋಕಪ್ರಸಿದ್ಧವು9 ಸರಸಿಜಮುಖಿ ವರತುರಗವನೇರಿದ ನೃಪರ ಗೆಲ್ವ ಕಲ್ಕಿಯೇ ಭಾಮೆ ದುರುಳ ಜನರು ಇಲ್ಲಿ ಸೇರುವುದಿಲ್ಲವೊ ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10 ಪರಿ ಸರಸವನಾಡುವ ನಾಮಗಿರಿ ನರಹರಿ ರೂಪ ರಮಾ ರಮೇಶರು ವಿಹರಿಪ ಬಗೆಯನು ಸ್ಮರಿಸುವ ಸುಜನರ ಪರಮಪುರುಷ ಹರಿ ಪೊರೆವುದು ನಿಜ 11
--------------
ವಿದ್ಯಾರತ್ನಾಕರತೀರ್ಥರು
ಸಲಹಯ್ಯಾ ಲಕ್ಷೀರಮಣ ಸರುವದ ನಮ್ಮನು ನೀ ಪ ಊರೊಳಗಿರಲಿ ಊರು ಬಿಟ್ಟಿರಲಿ ದಾರಿಯ ಬಿಟ್ಟು ನಾ ಸಂಚರಿಸುತಿರಲಿ ಮಾರಮಣ ಮುರಾರಿ ನಿನ್ನಯ ಪಾದ ವಾರಿಜನ ನಂಬಿ ಸೇರಿದ ಭಕುತರ 1 ಸಿರಿಯೆನಗಿರಲಿ ಎಡರೆನಗಿರಲಿ ಮರುಳುತನವೆನಗೇ ಆವರಿಸಿರಲಿ ನರಹರಿ ನಿನ್ನಯ ಚರಣದ ಮಹಿಮೆಯ ಪರಿಪರಿಯಿಂದ ಪೊಗಳುವ ಮತಿಯಿತ್ತು 2 ದೊರೆತನ ಬರಲಿ ತಿರುಕನು ಆಗಲಿ ಬಂದೆ ಡಂಭದೊಳು ತಿರುಗುತಲಿರಲಿ ಕರಿವರದ ಶ್ರೀ ರಂಗೇಶವಿಠಲ ನಿನಮರೆಯದೆ ಹರುಷದಿ ನೆನೆವಂತೆ ಮಾಡಿ3
--------------
ರಂಗೇಶವಿಠಲದಾಸರು