ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
ಜಲಧಿ | ನಿಮ್ಮ ಮೊರೆಹೊಕ್ಕವರ ಕಾಯ್ದು ಪೊರೆಯುವಿರಿ ದಯದಿ ಪ. ಅರಿಯರು ಜಗದೊಳಗೆ ನರರು ನಿವಿ್ಮೂ ಮಹಿಮೆ ಕರಕರೆಪಡುತಿಹರು ಭವದೊಳಗೆ ಪರಮ ನಮ್ರತೆಯಿಂದ ಚರಣಕೆರಗಲು ಬಂದು ಉರುತರದ ಕಾರುಣ್ಯದಿಂದ ಪೊರೆಯುವಿರಿ 1 ಇಲ್ಲವೊ ಆಸೆ ಆಡಂಬರದ ದ್ರೌವ್ಯದಲಿ ಎಲ್ಲೆಲ್ಲಿ ನೊಡಲು ತತ್ವಬೋಧೆ ಉಲ್ಲಾಸದಿಂದ ಸಜ್ಜನರಿಗರುಹುತ ಮೋದ ಎಲ್ಲೆ ಕಾಣಿಸದಂಥ ಆನಂದವೀವ ಗುರು 2 ತಂದೆ ಮುದ್ದುಮೋಹನವಿಠ್ಠಲನೆಂದೆಂಬ ಬಹು ಚಂದದ ಅಂಕಿತದಿ ಜಗದಿ ಉದಿಸಿ ಮಂದರಿಗೆ ಸುಜ್ಞಾನ ತಂದು ರಕ್ಷಿಸುವಂಥ ಒಂದೊಂದು ಮಹಿಮೆಗಳ ಪೇಳಲೆನ್ನೊಶವೆ 2 ಅನಾದಿಯಿಂದಲಿ ಹೀನ ದೆಸೆಯೊಳಗಿದ್ದು ನಾನಾ ಜನ್ಮದಿ ಬಂದು ಕರ್ಮದಲಿ ತೊಳಲಿ ದೀನತ್ವವೈದುವ ಮಾನವನ ಕರುಣಿಸಿ ಸಾನುರಾಗದಿ ಹರಿಯ ಪದಕೆ ಸೇರಿಸುವಂಥ 3 ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತ ಹರಿ ಎಂತೆಂದು ಶ್ರೇಷ್ಠ ಕನಿಷ್ಠದ ಅರ್ಥ ತತ್ವ ತಿಳಿಸಿ ಕಷ್ಟ ಬಿಡಿಸುವ ಜಗತ್ಕರ್ತ ಒಬ್ಬನೆ ಹರಿಯು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆನುವ 5
--------------
ಅಂಬಾಬಾಯಿ
ನರಸಿಂಹಾವತಾರ ಕಮಲ ಸ ಮಾಧಿರೂಢ ಪದಾಬ್ಜ ಪೂರ್ಣ ಸು ಭಂಜನ ಮಾಧವ ಮುರಾರೆ ವ್ಯಾಧಿ ಪೀಡೆಯ ಪರಿಹರಿಸು ಮಹ ದಾದಿ ತತ್ವಯಂತ್ರೆ ನುತ ಪ್ರ ಲ್ಹಾದ ರಕ್ಷಕ ನರಹರಿಯೆ ದಹಿಸಖಿಳ ಶತ್ರುಗಳ 1 ಪ್ರಳಯಕಾಲದ ರವಿ ಸಮೂಹದ ಕಳೆಗು ಮಿಗಿಲಾಗಿರುವ ಮುಖದೊಳ್ ಥಳತಳಿಪ ದಂಷ್ಟ್ರಗಳ ತೋರುತ ಕಳೆದು ವದನವನು ಛಲದಿ ಚೀರುತ ದಾನವನ ಕಂ- ಗಳನು ಮುಚ್ಚಿಸಿ ಪಿಡಿದು ತಿಕ್ಕಿದ ಬಲ ಪಯೋನಿಧಿ ನರಹರಿಯೆ ದಹಿಸಖಿಳ ಶತ್ರುಗಳ 2 ಕಂಭದೊಳಗಂದಾದ ರವ ಕೇ- ದಿವಿಜ ಕ- ದಂಬ ಭಯಗೊಂಡಂಬರದ ಮೇಲಿಂಬುಗೊಂಡಿರಲು ಜಂಭ ವೈರಿಯ ಜರಿದು ಕೆಡಹಿದ ಕುಂಭಿ ಕುಂಭ ಭುಜದ್ವಯನ ಮುರಿ ದಂಬುಜಾಲಯರಮಣ ನರಹರಿ ದಹಿಸಖಿಳ ಶತ್ರುಗಳ 3 ಅಡಿಯಿಡುವ ರಭಸಕೆ ದಿಗಿಭಗಳು ನಡು ನಡುಗಲು ನಿಶಾಮುಖದಿ ಕೆಂ ಗಿಡಿಯನುಗುಳುತಲಾದಿ ದೈತ್ಯನ ಪಿಡಿದು ಖತಿಯಿಂಗ ತೊಡೆಯೊಳಿಕ್ಕೀರೈದು ಖರತರ ಕೊಡಲಿಯಂತಿಹ ನಖಗಳಿಂದ ನೊಡಲ ಬಗೆದಿಹ ನರಹರಿಯೆ ದಹಿಸಖಿಳ ಶತ್ರುಗಳ 4 ವರರಥಾಂಗಾದಿಗಳ ದ್ವಾದಶ ಕರದಿ ಧರಿಸುತಲೆರಡು ಕರದೊ ಳ್ಕರುಳಮಾಲೆಯ ಪಿಡಿದು ಮಿಕ್ಕಾದೆರಡು ಹಸ್ತಗಳ ಬೆರಳ ಕೊನೆಗಳ ತಿರುಹಿ ದಾನವ ಸುರವರನಖ ಮುಖದಿಂದ ಬಿಚ್ಚಿದ ನಿರವಧಿಕ ಬಲಪೂರ್ವ ನರಹರಿ ದಹಿಸಖಿಳ ಶತ್ರುಗಳ 5 ದತ್ತ ಸ್ವಾತಂತ್ರ್ಯವನು ಮೀರ್ದಾ ಪತ್ತು ಘಟಿಸುವ ಕಾಲದಲಿ ಪುರು- ಷೋತ್ತಮನ ನೆನೆದವರ ಕೈಪಿಡಿದೆತ್ತುತಿಹನೆಂದು ನಿತ್ಯ ಶಾಸ್ತ್ರಾದಿಗಳ ಶೋಧಿಸು ತುತ್ತುಮರು ಮೊದಲೆಂದ ಪೌರಾ- ಣೋಕ್ತಿಗಳ ನಿಜದೋರು ನರಹರಿ ದಹಿಸಖಿಳ ಶತ್ರುಗಳ 6 ಶೇಷಶಿಖರನಿವಾಸ ತತ್ಪದ ದಾಸರನು ಕಾಪಾಡಿ ಸಲಹುವ ಭಾಷೆಯನು ನೀ ಮರೆಪರೆ ಮದುಪಾಸ್ಯ ಸರ್ವೇಶ ಈಷದಂಜದ ದ್ವೇಷಿ ದುರ್ಜನ ನಾಶಗೈಸುವುದುಚಿತವೈ ಸವ ಕಾಶವ್ಯಾತಕೆ ನರಹರಿಯೆ ದಹಿಸಖಿಳ ಶತ್ರುಗಳ 7
--------------
ತುಪಾಕಿ ವೆಂಕಟರಮಣಾಚಾರ್ಯ
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ