ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಾಗಿಸಬೇಕು ಜಗದ್ಗುರುವಿನ ಕೃಪೆಯಿಂದ ಧ್ರುವ ಜಾಗಿಸದಲ್ಲದೆ ಖೂನ ಸುಗಮ ಸುಪಥದೋರದು ನಿಧಾನ ಯೋಗಿಜನರ ನಿಜಧನ ಆಗುದು ಸ್ವಾಧೀನ 1 ಜಾಗಿಸಿ ನೋಡಲು ಸ್ವಸುಖ ಬಗೆಬಗೆದೋರುತದೆ ಅನೇಕ ಅಗಣಿತಗಮ್ಯಾಲೋಲಿತ ಶ್ರೀಗುರು ಕೌತುಕ 2 ಝಗಿಝಗಿಸುವ ಜಗಜ್ಯೋತಿ ಜಾಗಿಸಿದ ಶ್ರೀ ಸದ್ಗುರುಮೂರ್ತಿ ಸಾಗಿ ಭವನಿದ್ರೆಯವಾರ್ತಿ ನೀಗಿದ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿರಂಜನ ಈಶ ಬಾರೊ ಕಾವ ಕರುಣ ಭವಭಂಜನ ಗುರು ಆತ್ಮ ಹಂಸ ಬಾರೊ ಧ್ರುವ ಅಗಣಿತ ಗುಣ ಅಗಾಧ ಅಪಾರಾಗಮ್ಯ ಬಾರೊ ನಿತ್ಯ ನಿರ್ಗುಣಾನಂದನುಪಮ್ಯ ಬಾರೊ ಯೋಗಿ ಜನರ ಹೃದಯ ಮುನಿಮನೋರಮ್ಯ ಬಾರೊ ಜಗದೊಳು ಭಕ್ತಜನರಿಗೆ ಪೂರಿತಕಾಮ್ಯ ಬಾರೊ 1 ಝಗಿಝಗಿಸುವ ಜಗಜ್ಯೋತಿ ಜಗನ್ಮೋಹನ ಬಾರೊ ಮಘ ಮಘ ಮಿಂಚುವ ಮಗುಟಮಣಿ ಗುಣರನ್ನ ಬಾರೊ ಬಗೆಬಗೆಯಿಂದ ಸದ್ಗೈಸುವ ಪತಿತಪಾವನ್ನ ಬಾರೊ 2 ಋಷಿ ಮುನಿವಂದಿತ ಸಾಧು ಜನ ಹೃದಯ ಬಾರೊ ಗುಹ್ಯ ಬಾರೊ ದಾಸ ಮಹಿಪತಿಯ ರಕ್ಷಿಸುವ ಪ್ರಾಣ ಪ್ರಿಯ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಂದರ ಮೂರುತಿ ಹರಿಯೆ ಬಾ- ರೆಂದು ಕಶ್ಯಪ ಋಷಿ ಅದಿತಿಯರು ಮಂದಹಾಸದಿ ನಮ್ಮ ಮಂದಿರಕೀಗ ಗೋ- ವಿಂದ ಬಾ ಶ್ರೀಮುಕುಂದ ಬಾ ಯಾದವ ವೃಂದ ಬಾ ಬಲುಮುದದಿಂದ ಬಾ ಬಾ- ರೆಂದು ಕರದಾರು ಶೋಭಾನೆ 1 ಅಚ್ಚುತಾನಂತ ಶ್ರೀಹರಿ ನೀನು ಸಚ್ಚಿದಾನಂತಾತ್ಮನೆ ನೀನು ಮಿತ್ರೆ ಲಕುಮಿ ಒಡಗೂಡುತ ಬಾರೆಂದು ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು ಕೀರ್ತಿಪರು ಅನಸೂಯಾತ್ರಿಯರು ಬಾರೆಂದು ಕರೆದಾರು ಶೋಭಾನೆ 2 ಭಾಗವತರ ಪ್ರಿಯ ಬಾರೆಂದು ಭಾರದ್ವಾಜರು ಭಕ್ತಿಯಲಿ ಸತಿ ಸುಶೀಲೆ- ಯರು ಸುಂದರ ನಾರಿಯರು ಕರೆವರು ಕಂಸಾರಿ ಬಾರೆಂದು ಕರದಾರು ಶೋಭಾನೆ 3 ಹಸ್ತಿವರದ ಹರಿ ಬಾರೆಂದು ವಿಶ್ವಾಮಿತ್ರರು ಹರುಷದಲಿ ಸತಿ ಸಹಿತದಿ ಕರೆವರು ಭಕ್ತಿಯಲಿ ಪರಮಾಸಕ್ತಿಯಲಿ ಹರಿಯನು ಸ್ತೋತ್ರದಲಿ ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4 ಕೌಶಿಕ ಯಜ್ಞಪಾಲನೆ ಬಾ ಕಂಸನ ಸಭೆಯಲಿ ಸೆಳೆದನೆ ಬಾ ಹಂಸವಾಹನಪಿತ ಬಾರೆಂದು ಕರೆವರು ಗೌತಮರು ಪತ್ನಿ ಅಹಲ್ಯೆಯರು ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ ಬಾರೆಂದು ಕರದಾರು ಶೋಭಾನೆ 5 ಜಗದುದರನೆ ಶ್ರೀ ಹರಿಯೆ ಬಾ ನಿಗಮತಂದು ಸುತಗಿತ್ತನೆ ಬಾ ಝಗಿಝಗಿಸುವ ಆಭರಣಗಳ್ಹೊಳೆಯುತ ಬಾರೆಂದು ಜಯ ಜಯವೆನ್ನುವರು ಋಷಿ ಜಗದಗ್ನಿಯರು ರೇಣುಕ ಸಹಿತ ಶ್ರೀಶನ ಕರದಾರು ಶೋಭಾನೆ 6 ಮದನ ಗೋಪಾಲನಿಗೆ ಮಂಗಳ ಯದುಕುಲ ತಿಲಕನಿಗೆ ಮಂಗಳ ಕಮಲಾನಾಭ ವಿಠ್ಠಲನಿಗೆ ಸತಿ ಅ- ರುಂಧತಿಯರು ಜಯ ಜಯ ಮಂಗಳವೆಂದು ಕರದಾರು ಶೋಭಾನೆ7 ಶೋಭನವೆನ್ನಿರೆ ಶ್ರೀಹರಿಗೆ ಶೋಭನವೆನ್ನಿರೆ ಮಾಧವಗೆ ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ ಸಿರಿಯರಸಗೆ ದಿವ್ಯ ಶೋಭಾನೆ ಪರಮಪುರುಷನಿಗೆ ಶೋಭಾನೆ ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
--------------
ನಿಡಗುರುಕಿ ಜೀವೂಬಾಯಿ