ಬಂದಳು ಭಾಗ್ಯನಿಧಿ ಶ್ರೀವರನಿಧಿ
ಬಂದಳು ಭಾಗ್ಯನಿಧಿ ಪ.
ಅರಿಶಿಣ ಕುಂಕುಮ ಪರಿಮಳ ಗಂಧವು
ನಿನಗರ್ಪಿಸುವೆನು ತಾಯೆ ಶ್ರೀವರನಿಧಿ 1
ಜಾಜಿ ಮಲ್ಲಿಗೆ ರೋಜಾ ಸಂಪಿಗೆ
ಸೋಜಿಗಮಾಗಿಹ ಸುರಗಿ ಅರ್ಪಿಸುವೆನು 2
ಜರಿಯ ಪೀತಾಂಬರ ಝಗಝಗಿಸುತಲಿ
ಜಗದೊಡೆಯನ ರಮಣಿ ಶ್ರೀ ವರಲಕ್ಷ್ಮಿ 3
ಕದಳಿ ಖರ್ಜೂರವೂ ಬದಳಿ ದಾಳಿಂಬವು
ಮುದದಿ ತೆಂಗಿನಕಾಯಿ ಫಲವ ಅರ್ಪಿಸುವೆನು 4
ಶುಕ್ರವಾರದಿ ಭಕ್ತರ ಮನೆಯೊಳು
ನಿತ್ಯ ಪೂಜೆಯಗೊಳ್ವ ಶ್ರೀ ವರನಿಧಿ 5
ಶ್ರೀ ಶ್ರೀನಿವಾಸನ ಪ್ರೀತಿಯ ಲಕ್ಷ್ಮಿ
ನೀ ಕರುಣದಿ ಸಲಹೆ ಶ್ರೀ ವರಲಕ್ಷ್ಮಿ 6