ನಾರಸಿಂಹ ಶ್ರೀ ನಾರಸಿಂಹ
ಪಾರುಗಾಣಿಸಿ ದುರಿತೌಘಹರಿಸಿ ಕಾಯೊ ಪ
ನರಹರಿ ಜ್ವರಹರ ಘೋರವ್ಯಾಧಿಯ
ಪರಿಹಾರಗೈಸಿ ಪರಿಪಾಲಿಸಬೇಕಯ್ಯಾ ಅ.ಪ
ಘುಡು ಘುಡಿಸುತ ಪಲ್ಕಡಿದು ಚೆಂಡಾಡುತ
ಮೃಡನೆ ಪರನು ಎಂದು ನುಡಿದ ಕಶಿಪುವಿನ
ಒಡನೆ ಕಂಭದಿ ಬಂದು ಒಡಲ ಬಗೆದು ನಿನ್ನ
ಧೃಡ ಭಕುತಗೆ ಬಂದೆಡರ ಬಿಡಿಸಿದೆ1
ತುಷ್ಟಿಪಡಿಸೊ ಪರಮೇಷ್ಟಿಯ ಪಿತ ನಿನ್ನ
ದೃಷ್ಟಿಯಿಂದ ಅನಿಷ್ಟ ನಿವಾರಣ
ಅಷ್ಟಕರ್ತೃತ್ವದ ಪ್ರಭೋಕಷ್ಟಹರಿಸಿಭಕ್ತ-
ರಿಷ್ಟ ಪಾಲಿಪ ಸರ್ವಸೃಷ್ಟಿಗೊಡೆಯ ದೇವ2
ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ
ವೇಂಕಟೇಶಾತ್ಮಕ ಭೀಕರ ರೂಪ
ಶಂಕರಾಂತರ್ಗತ ಸಂಕರುಷಣ ಮೂರ್ತೇ
ಮಂಕುಹರಿಸಿ ಪಾದಪಂಕಜ ತೋರಯ್ಯ 3