ಸೇರದಾದವು ಅಶನವಸನಗಳಾರೊಡನೆ ನಾ ಪೇಳಲಿ ಪ
ಸಾರಸಾಕ್ಷ ಮುರಾರಿ ಕೃಷ್ಣನ ಮೂರುತಿಯ ನಾ ಕಾಣದೆ ಅ.ಪ
ಹಿಂದೆ ವನದಲಿ ಸುಂದರಾಂಗ ಮುಕುಂದ ಕೃಷ್ಣನ ಪರಿಪರಿ
ಅಂದ ಲೀಲೆಗಳಿಂದ ಪೊಂದಿದ ನಂದಗಳ ನೆನೆ ನೆನೆದರೆ 1
ಮಾರಜನಕನು ಜಾರನೆಂಬ ವಿಚಾರವನು ನಾನರಿಯದೆ
ಸೇರಿದೆನು ಮನಸಾರ ಮುದದಲಿ ಯಾರಿಗಳವೇ ಮರೆಯಲು 2
ಮೋಸಗಾರನ ಆ ಸೊಬಗುಗಳಿಗಾಸೆ ಪೊಂದಿದ ಪಸುಳೆಯ
ಆಸೆಭಂಗದ ಕ್ಲೇಶವನು ಜಗದೀಶನೊಬ್ಬನೆ ಬಲ್ಲನು3
ತರುಲತೆಗಳು ಹರಿವ ಯಮುನಾ ಸರಿದೇನಾದರೂ ಬಲ್ಲವೆ
ಸರಸದಲಿ ತಿರುತಿರುಗುತಿಹ ಮುರಹರನ ಸುದ್ಧಿಯ ಕೇಳಲೆ4
ಘನ್ನ ಮಹಿಮೆ ಪ್ರಸನ್ನ ಕೃಷ್ಣನು ತನ್ನ ಸಂತಸದಿಂದಲಿ
ಎನ್ನ ಕರಗಳಿಗೊಮ್ಮೆ ಸಿಕ್ಕಲು ಇನ್ನು ಅವನನು ಬಿಡುವೆನೆ 5