ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ
ಗುರು ಸಂರಕ್ಷ ಧ್ರುವ
ಅಳುಕದೆ ಬಳುಕದೆ ತುಳುಕದೆ ನಿಂದು ತಿಳಕೊ ನಿಜಸುಭಿಕ್ಷೆ
ಕೊಳಕ ಹುಳಕ ಮೊಳಕನೆಂದು ಮಾಡದಿರುಪೇಕ್ಷ
ನಾಳೆ ನಾಡದಿಂದ್ಯಾಗೆಂದು ಕಲ್ಪಿಸಿಕೊಬ್ಯಾಡಪೇಕ್ಷ 1
ಲಜ್ಜೆ ಅಳಿದು ಗುರು ಶರಣವ ಹೊಕ್ಕು ಸರಕ್ಕನೆ ಕೋ ಸುಭಿಕ್ಷೆ
ಹೆಜ್ಜೆಜ್ಜಿಗೆ ಸುರಿಮಳೆಗರೆವುತಲದೆ ಗುರುಕರುಣದಕಟಾಕ್ಷ
ಫಜ್ಜಿಗೆ ಬಂದುವರಿತ ಮ್ಯಾಲೆ ಕಂಜನಾಭನೆ ಸುಪಕ್ಷ 2
ಬೇಡಿಸಿಕೊಳ್ಳದೆ ನೀಡುತಲಾನೆ ಭಾಸ್ಕರ ಗುರು ಸಮರ್ಥ
ನೀಡಿ ನಿಜನಿಧಾನವ ಕೊಟ್ಟು ಮಾಡುತಲಾನೆ ಹಿತಾರ್ಥ
ಬಡವರಾಧಾರೆನ್ನೊಡೆಯನೆ ಜಗತ್ರಯಕ್ಕೊಬ್ಬನೆ ಕರ್ತ
ಮೂಢ ಮಹಿಪತಿಗನುದಿನ ಬಿಡದೆ ನೀಡುತಾನೆ ಸಕಲಾರ್ಥ 3