ಪಂಥವ್ಯಾಕೋ ಪ್ರತಿಜ್ಞೆ ಯಾಕೋ ಪ
ಸಂತಸದಿ ನಿನ್ನಂತರಂಗದಿ
ಕಂತುಪಿತ ನೀನೆನಲು ಸಾಕೊ ಅ.ಪ
ಕೋಪವ್ಯಾಕೊ ತಾಪವ್ಯಾಕೋ
ತಾಪತ್ರಯಗಳ ಲೋಪ ಸಿರಿವರ
ಕಾಪಾಡೆನಲದೊಂದೆ ಸಾಕೊ 1
ಕುಂದು ಯಾಕೋ ನಿಂದೆ ಯಾಕೋ
ಸಿಂಧುಶಯನಗೋವಿಂದಗರ್ಪಿ
ತೆಂದು ನೋಡ್ಹೆಚ್ದಿಂದ್ಯಾಕೆ ಬೇಕೊ 2
ಕ್ಷೇತ್ರ ಯಾಕೋ ಯಾತ್ರವ್ಯಾಕೋ
ಖಾತ್ರಿಯಿಂದ ಜಗತ್ರಯಕೆ ಸು
ಸೂತ್ರಾಧಾರಿಯೆಂದ ಮಾತ್ರ ಸಾಕೊ 3
ಸ್ನಾನವ್ಯಾಕೋ ಸಂಧ್ಯಾನವ್ಯಾಕೋ
ಜ್ಞಾನವಿಡಿದು ಭಕ್ತಪ್ರಾಣನಾಥನ
ಧ್ಯಾನಗೈಯಲದೊಂದೆ ಸಾಕೊ 4
ಜಪವು ಯಾಕೋ ತಪವು ಯಾಕೋ
ಕಪಟನೀಗಪರಿಮಿತ ಹರಿಯ
ಗುಪಿತದಿಂದರ್ಚಿಸಲು ಸಾಕೊ 5
ಮಂತ್ರವ್ಯಾಕೋ ತಂತ್ರವ್ಯಾಕೋ
ಮಂತ್ರಮೂರ್ತಿ ಸರ್ವಾಂತರ್ಯಾಮಿಯ
ಅಂತರಂಗ ತಿಳಿಯೆ ಸಾಕೊ 6
ನೇಮವ್ಯಾಕೋ ನಿತ್ಯವ್ಯಾಕೋ
ಸ್ವಾಮಿಯೆನುತ ಪ್ರೇಮಿಯ ಶ್ರೀ
ರಾಮನ ನಂಬಿಕೊಳ್ಳಲು ಸಾಕೊ 7