ಅಗಜೆ ನಿನ್ನೊಗೆತನದ ಸೊಗಸನೇನೆಂಬೆ
ಜಗವೆಲ್ಲ ನಗುವಂತೆ ಹಗರಣವೆ ತೋರಿಸುವೆ ಪ.
ಕೆಂಗಣ್ಣು ಕೊನೆಮೀಶೆ ಅಂಗವೆಲ್ಲ ವಿಭೂತಿ
ಗಂಗೆ ಶಿರದಲಿ ಬಹು ಭುಜಂಗ ಭೂಷಣನು
ತುಂಗ ತ್ರಿಶಿಖಿವ ಪಿಡಿದು ರಂಗನಟನಂತಿರುವ
ಅಂಗ ಪೂಜೆಯಗೊಂಬ ಇಂಗಿತೇಶನು ಪತಿಯು 1
ಗೌರಿಯ ಮಗನಾರುಮುಖಿ ಕರಿವದನ ಮತ್ತೋರ್ವ
ಮರುಳುಭೂತಗಳೆಲ್ಲ ಪರಿವಾರವು
ಸುರನಾಥನರಸಿ ಶಚಿ ಗುರು ಮಹಿಳೆ ತಾರಾದಿವರೆ ನಿನ್ನ
ಪರಮ ಸೌಂದರಿಯಕಿದು ಸರಿಯೆಂತು 2
ಶತ್ರುಜಯ ಸೌಭಾಗ್ಯ ಪುತ್ರ ಮಿತ್ರ ಕಳತ್ರ
ಚಿತ್ರ ಸುಖದಾಯ ಸರ್ವತ್ರ ಪೂಜ್ಯೆ
ಸುತ್ರಾಮಗೊಲಿದೀ ಜಗತ್ರಯವ ಪೊರೆವಸುರ
ಮಿತ್ರ ವೆಂಕಟಪತಿಯ ಪಾತ್ರನೆಂತ್ವಧುವಾದಿ 3