ಮರೆತಿರಲಾರೆ ಮನಸಾರೇ ಹರೇ ಪ
ಮರೆತಿರಲಾರೆ ನಾ ಮಹಿತಚಾರಿತ್ರನ
ಸರಸಿಜಪತ್ರ ನೇತ್ರನ ಅ.ಪ
ಬಗೆಬಗೆ ರತಿಯಲಿ ಜಗವನು ಮೋಹಿಪ
ಸುಗುಣನ ಜಗತ್ಪ್ರಾಣನ 1
ಚೇತನರಿಗೆ ಸುಖದಾತನ ದುಃಖ ವಿ
ಘಾತನ ಲಕ್ಷ್ಮೀನಾರಾಯಣನ 2
ದಾಸರ ಹೃದಯನಿವಾಸನ
ದೋಷನಿರಾಸನ ಶ್ರೀನಿವಾಸನ 3
ವೆಂಕಟರಮಣನ ಕಿಂಕರಶರಣನ
ಸಂಕಟಹರ ನಿಷ್ಕಳಂಕನ 4
ಮಾನಿನಿಯ ಅಭಿಮಾನವ ಕಾಯ್ದನ
ದೀನರ ಹರ್ಷನಿಧಾನನ 5
ರಾಮನ ದೈತ್ಯವಿರಾಮನ ಪಾವನ
ನಾಮನ ಹೃದಯಾರಾಮನ 6
ಧರೆಯೊಳುತ್ತಮಪುಲಿಗಿರಿಯೊಳು ನೆಲಸಿಹ
ವರದ ವಿಠಲವರದನ ದೇವನ 7